ADVERTISEMENT

ಕಲುಷಿತ ನೀರು ಸೇವನೆ: ಮೃತರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರಕ್ಕೆ ಬೇಡಿಕೆ

ಚಿನ್ನೇನಹಳ್ಳಿ ಗ್ರಾಮಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 4:40 IST
Last Updated 16 ಜೂನ್ 2024, 4:40 IST
ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಮೃತರ ಮನೆಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಚರ್ಚಿಸಿದರು
ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಮೃತರ ಮನೆಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಚರ್ಚಿಸಿದರು   

ಮಧುಗಿರಿ: ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡು ಮೃತಪಟ್ಟ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿನ ಮೃತರ ಆರು ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸರ್ಕಾರವನ್ನು ಒತ್ತಾಯಿಸಿದರು.

ಚಿನ್ನೇನಹಳ್ಳಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರಕ್ಕೆ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ. ಇಂತಹ ಸರ್ಕಾರಕ್ಕೆ ಮಾನ, ಮರ್ಯಾದೆ ಯಾವುದೂ ಇಲ್ಲ ಎಂದರು.

ADVERTISEMENT

ಗ್ರಾಮದಲ್ಲಿ ವಾಂತಿ, ಭೇದಿಯಾಗಿ ಆರು ಮಂದಿ ಮೃತಪಟ್ಟಿದ್ದರೂ ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿ ಮಾಹಿತಿ ಕೇಳಿದರೆ ಒಬ್ಬರೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಕೆಲವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ರಾಜ್ಯ ಸರ್ಕಾರ ಸಾವನ್ನು ಮುಚ್ಚಿಡುವ ಕೆಲಸವನ್ನು ಅಧಿಕಾರಿಗಳಿಂದ ಮಾಡಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅನಕ್ಷರಸ್ಥರು. ಅಧಿಕಾರಿಗಳೇ ಸಹಜ ಸಾವು ಎಂದು ಬರೆದು ಅವರಿಂದ ಸಹಿ ಪಡೆದು ಸಾವನ್ನು ಮುಚ್ಚಿ ಹಾಕಿದ್ದಾರೆ. ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳು ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಿದ್ದರೆ, ಅಮಾಯಕರು ಬಲಿಯಾಗುತ್ತಿರಲ್ಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಸಾವು ಸಂಭವಿಸಿವೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಈ ಪ್ರಕರಣವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಹಶೀಲ್ದಾರ್ ಸಿಗ್ಮತ್ ಉಲ್ಲಾ, ತಾ.ಪಂ.ಇಒ ಲಕ್ಷ್ಮಣ್, ಡಿಎಚ್ಒ ಮಂಜುನಾಥ್, ಟಿಎಚ್ಒ ಶ್ರೀನಿವಾಸ್, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು ಹಾಜರಿದ್ದರು.

‘ಸುಳ್ಳು ವರದಿ: ಸತ್ಯ ಮುಚ್ಚಿಟ್ಟ ಅಧಿಕಾರಿಗಳು’

ಚಿನ್ನೇನಹಳ್ಳಿ ಗ್ರಾಮದಲ್ಲಿ 6 ಜನ ಸತ್ತಿದ್ದರೆ ಅಧಿಕಾರಿಗಳು ಮೂರು ಜನ ಎಂದು ತಪ್ಪು ಮಾಹಿತಿ ನೀಡುತ್ತಿದ್ದು 200ಕ್ಕೂ ಹೆಚ್ಚು ಜನ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದರು. ಗ್ರಾಮದ ಮೃತರ ಮನೆಗಳಿಗೆ ಬೇಟಿ ನೀಡಿದಾಗ ‘ನಮಗೆ ಅವರು ಯಾವ ಉದ್ದೇಶಕ್ಕೆ ಸಹಿ ಹಾಕಿಸಿಕೊಂಡರು ಎಂಬ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಅಧಿಕಾರಿಗಳು ಬಲವಂತದಿಂದ ಸಹಿ ಹಾಕಿಸಿಕೊಂಡಿದ್ದಾರೆ’ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಅಧಿಕಾರಿಗಳು ಕೆಲವರು ಕುಡಿದು ಲಿವರ್‌ ತೊಂದರೆಯಾಗಿ ಸತ್ತಿದ್ದಾರೆ ಎಂದು ಮಾಹಿತಿ ನೀಡುತ್ತಿದ್ದಾರೆ. ಆದರೆ ಸತ್ತವರು ಒಮ್ಮೆಯೂ ಬೀಡಿ ಸಿಗರೇಟ್ ಸಹ ಸೇದಿಲ್ಲ. ಇನ್ನು ಕಡಿಯುವ ಮಾತೆಲ್ಲಿ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಲವಂತದಿಂದ ಸಾವನ್ನು ಮುಚ್ಚಿಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.