ಶಿರಾ: ಸಾರಿಗೆ ನೌಕರರ ಬೇಡಿಕೆಯನ್ನು ಕಾಲಹರಣ ಮಾಡದೇ ಶೀಘ್ರವೇ ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿರುವ ಉದ್ಯಾನದಲ್ಲಿ ಸೋಮವಾರ ಕೆಎಸ್‌ಆರ್‌ಟಿಸಿ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಬಾಯಿ ಮಾತಿನ ಬೇಡಿಕೆ ಈಡೇರಿಕೆಯಿಂದ ನೌಕರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ನೌಕರರ ಬಹುಮುಖ್ಯ ಬೇಡಿಕೆಯಾದ 6ನೇ ವೇತನ ಆಯೋಗ ಜಾರಿ ಮಾಡುವ ತೀರ್ಮಾನಕ್ಕೆ ಸರ್ಕಾರ ಬರಬೇಕು. ಆಗ ಮಾತ್ರ ನೌಕರರ ಹಿತಕಾಯಲು ಸಾಧ್ಯ ಎಂದರು.
ಕೊರೊನಾ ಸಮಯದಲ್ಲಿ ಜನತೆ ಸಂಕಷ್ಟದಲ್ಲಿದ್ದಾರೆ. ಜೊತೆಗೆ ಯುಗಾದಿ ಹಬ್ಬ ಸಹ ಇರುವುದರಿಂದ ಜನರು ಊರಿಗೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾರಿಗೆ ನೌಕರರ ಸಮಸ್ಯೆ ಕೇಳುವ ಸೌಜನ್ಯ ಸಹ ಸರ್ಕಾರಕ್ಕೆ ಇಲ್ಲ. ಇಂತಹ ಸಮಯದಲ್ಲಿ ಸರ್ಕಾರ ಹಠಮಾರಿ ಧೋರಣೆ ತಾಳದೆ ನೌಕರರ ಹಿತಕಾಯುವ ಜೊತೆಗೆ ಸಾರ್ವಜನಿಕರ ತೊಂದರೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಇಲಾಖೆ ನೌಕರರು ಮತ್ತು ಕುಟುಂಬದ ಸದಸ್ಯರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.