ADVERTISEMENT

ತುಮಕೂರು | ಖಾಲಿಯಾದ ಕೆರೆ, ಮೀನುಗಾರಿಕೆಗೂ ಬರ: ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 5:46 IST
Last Updated 15 ಜನವರಿ 2024, 5:46 IST
ತುಮಕೂರು ತಾಲ್ಲೂಕಿನ ಹೊನ್ನುಡಿಕೆ ಕೆರೆ
ತುಮಕೂರು ತಾಲ್ಲೂಕಿನ ಹೊನ್ನುಡಿಕೆ ಕೆರೆ   

ತುಮಕೂರು: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ ಮಳೆಯೂ ಸುರಿಯದೆ ಕೆರೆಗಳು ಖಾಲಿ ಖಾಲಿಯಾಗಿದ್ದು, ಮೀನುಗಾರಿಕೆಗೂ ‘ಬರ’ ಆವರಿಸಿದೆ.

ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ 40 ಹೆಕ್ಟೇರ್‌ ಜಲ ವಿಸ್ತೀರ್ಣ ಹೊಂದಿರುವ 401 ಕೆರೆಗಳಿವೆ. ಇದರಲ್ಲಿ ನವೆಂಬರ್‌ ಅಂತ್ಯದ ವರೆಗೆ 325 ಕೆರೆಗಳನ್ನು ಮೀನುಗಾರಿಕೆಗೆ ನೀಡಲಾಗಿದೆ. 2022–23ನೇ ಸಾಲಿನಲ್ಲಿ 374 ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಒಟ್ಟು ₹4.12 ಕೋಟಿ ಆದಾಯ ಬಂದಿತ್ತು. ಈ ವರ್ಷ ಇದು ₹3.58 ಕೋಟಿಗೆ ಇಳಿಕೆಯಾಗಿದೆ.

ಶೇ 50ರಷ್ಟು ಭರ್ತಿಯಾದ ಕೆರೆಗಳಲ್ಲಿ ಮಾತ್ರ ಮೀನುಗಾರಿಕೆಗೆ ಅನುಮತಿ ಕೊಡಲಾಗುತ್ತಿದೆ. ಈ ವರ್ಷ ಜಿಲ್ಲೆಯ ಎಲ್ಲಿಯೂ ಸರಿಯಾಗಿ ಮಳೆಯಾಗಿಲ್ಲ. ಇದರಿಂದ ಬಹುತೇಕ ಕೆರೆಗಳಲ್ಲಿ ಅರ್ಧದಷ್ಟು ನೀರಿಲ್ಲ. ಇದು ಮೀನುಗಾರಿಕೆಯ ಹಿನ್ನಡೆಗೆ ಕಾರಣವಾಗಿದೆ. ಇದರಿಂದ ಮೀನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದವರ ಬದುಕು ಕತ್ತಲಾಗಿದೆ. ಹಲವು ಕೆರೆಗಳಲ್ಲಿ ಮೀನುಗಾರಿಕೆ ನಿಂತಿದ್ದು, ಬೇರೆ ಕೆಲಸ ಮಾಡಲು ಆಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ADVERTISEMENT

ಕುಣಿಗಲ್‌ ತಾಲ್ಲೂಕಿನ ಮಾರ್ಕೋನಹಳ್ಳಿ, ಮಂಗಳ ಜಲಾಶಯ, ಕೊರಟಗೆರೆ ತಾಲ್ಲೂಕಿನ ತೀತಾ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೋರನಕಣಿವೆ ಸೇರಿದಂತೆ ಜಿಲ್ಲೆಯಲ್ಲಿ ನಾಲ್ಕು ಜಲಾಶಯಗಳಿವೆ. ಜಲಾಶಯದ ವ್ಯಾಪ್ತಿಯ ಜನರಿಗೆ ಇಲ್ಲಿ ಮೀನುಗಾರಿಕೆಗೆ ಅವಕಾಶ ನೀಡಲಾಗುತ್ತದೆ. ವರ್ಷಕ್ಕೆ ₹3 ಸಾವಿರ ನಿಗದಿ ಪಡಿಸಿದ್ದು, ಮೀನುಗಾರರು ಇಲಾಖೆಯಲ್ಲಿ ಶುಲ್ಕ ಪಾವತಿಸಿ ಮೀನುಗಾರಿಕೆಗೆ ಅನುಮತಿ ಪಡೆಯುತ್ತಿದ್ದಾರೆ.

ಈ ಹಿಂದೆ ಹರಾಜು ಮುಖಾಂತರ ಕೆರೆಗಳನ್ನು ನೀಡಲಾಗುತ್ತಿತ್ತು. ಆಗ ಯಾರು ಬೇಕಾದರೂ ಭಾಗವಹಿಸಿ, ಕೆರೆಗಳನ್ನು ಪಡೆದುಕೊಳ್ಳಬಹುದಿತ್ತು. ಅತ್ಯಂತ ಕಡಿಮೆ ಬೆಲೆಗೆ ಕೆರೆಗಳನ್ನು ನೀಡಲಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು. ಇದನ್ನು ತಡೆಯವ ಉದ್ದೇಶದಿಂದ ಪಾರದರ್ಶಕವಾಗಿ ಕೆರೆಗಳ ಹಂಚಿಕೆ ಕಾರ್ಯ ನಡೆಸಲು ಕಳೆದ ಎರಡು ವರ್ಷಗಳ ಹಿಂದೆ ಇ–ಟೆಂಡರ್‌ ಪ್ರಕ್ರಿಯೆ ಜಾರಿಗೆ ತರಲಾಗಿದೆ.

2019–20ನೇ ಸಾಲಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 230 ಹೆಕ್ಟೇರ್‌ ವಿಸ್ತೀರ್ಣದ ಬುಗುಡನಹಳ್ಳಿ ಕೆರೆಯನ್ನು ಕೇವಲ ₹43 ಸಾವಿರಕ್ಕೆ ಐದು ವರ್ಷದ ಅವಧಿಗೆ ಮೀನುಗಾರಿಕೆಗೆ ನೀಡಲಾಗಿತ್ತು. ಕಳೆದ ವರ್ಷ ಹೊನ್ನುಡಿಕೆ ಕೆರೆಯನ್ನು ಇ–ಟೆಂಡರ್‌ ಮುಖಾಂತರ ನೀಡಿದ್ದು 71 ಹೆಕ್ಟೇರ್‌ ಪ್ರದೇಶದ ಕೆರೆಯನ್ನು ₹5.83 ಲಕ್ಷಕ್ಕೆ ಕೊಡಲಾಗಿದೆ.

‘ಟೆಂಡರ್‌ ಮುಖಾಂತರವೇ ಕೆರೆಗಳ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಮೊತ್ತಕ್ಕೆ ಕೆರೆಗಳನ್ನು ನೀಡುವ ಕೆಲಸವಾಗುತ್ತಿದೆ. ಹರಾಜು ಸಮಯದಲ್ಲಿ ₹50 ಸಾವಿರಕ್ಕೆ ಹೋಗುತ್ತಿದ್ದ ಕೆರೆಗಳು ಈಗ ₹2 ಲಕ್ಷದಿಂದ ₹3 ಲಕ್ಷಕ್ಕೆ ನಿಗದಿಯಾಗುತ್ತಿವೆ’ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.

325 ಕೆರೆಗಳಲ್ಲಿ ಮೀನುಗಾರಿಕೆಗೆ ಜಿಲ್ಲೆಯ ಕೆರೆಗಳು ಖಾಲಿ ಮೀನುಗಾರರಿಗೆ ಸಂಕಷ್ಟ
ಕೆರೆಗಳಲ್ಲಿ ನೀರಿಲ್ಲದ ಕಾರಣ ಮೀನುಗಾರಿಕೆಗೆ ಸಮಸ್ಯೆಯಾಗುತ್ತಿದೆ. ಈ ಬಾರಿ ಆದಾಯವೂ ಕುಸಿತವಾಗಿದೆ
ಶಿವಶಂಕರ್‌ ಉಪನಿರ್ದೇಶಕ ಮೀನುಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.