ADVERTISEMENT

ದೇಶಿ ಉತ್ಪನ್ನ: ಕಾಯಕ ಸಮುದಾಯಕ್ಕಿದೆ ಶಕ್ತಿ

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 1:52 IST
Last Updated 18 ಜನವರಿ 2021, 1:52 IST
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ, ಪುರಸಭೆ ಸದಸ್ಯರನ್ನು ಅಭಿನಂದಿಸಲಾಯಿತು
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ, ಪುರಸಭೆ ಸದಸ್ಯರನ್ನು ಅಭಿನಂದಿಸಲಾಯಿತು   

ಪಾವಗಡ: ವಿದೇಶಿ ಆಕ್ರಮಣ ಮೆಟ್ಟಿ ನಿಂತು ಸ್ವದೇಶಿ ಉತ್ಪನ್ನಗಳ ತಯಾರಿಕೆ ಹೆಚ್ಚಿಸುವ ಸಾಮರ್ಥ್ಯ ತಳ ಕಾಯಕ ಸಮುದಾಯಗಳಿಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದರು.

ಪಟ್ಟಣದಲ್ಲಿ ತಾಲ್ಲೂಕು ಮಡಿವಾಳ ಮಾಚಿದೇವ ಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶರಣರ ಪರವಾಗಿ ಮಾಚಿದೇವ ಅವರು ಸಮ ಸಮಾಜಕ್ಕಾಗಿ ತಮ್ಮದೇ ಶೈಲಿಯಲ್ಲಿ ಶ್ರಮಿಸಿದ್ದಾರೆ. ರೈತ, ಕಮ್ಮಾರ, ಕುಂಬಾರ, ಬಟ್ಟೆ ಹೊಲಿಯುವುದು ಸೇರಿದಂತೆ ಎಲ್ಲ ಕಾಯಕ ಮಾಡುವುದು ಶ್ರಮಿಕ ಸಮುದಾಯಗಳು. ಆದರೆ ತಳ ಸಮುದಾಯಗಳು ಹಕ್ಕುಗಳಿಂದ ವಂಚಿತವಾಗಿವೆ. ಸೌಲಭ್ಯಗಳು ಸಿಗದೆನಲುಗುತ್ತಿವೆ. ಆದರೆ ಇಂತಹ ಸಮುದಾಯಗಳಿಗೆ ವಿದೇಶಿ ಆಕ್ರಮಣವನ್ನು ಸಾಮರ್ಥ್ಯವಾಗಿ ಎದುರಿಸುವ ಶಕ್ತಿ ಇದೆ ಎಂದರು.

ADVERTISEMENT

ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಮಡಿವಾಳ ಸಮುದಾಯಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನೀಡುವ ಅಗತ್ಯವಿದೆ. ಭೂಮಿ, ವಸತಿ, ಉದ್ಯೋಗ ಇಲ್ಲದೆ ಇತರೆಡೆ ವಲಸೆ ಹೋಗಿದ್ದವರು ಗ್ರಾಮಗಳಿಗೆ ಮರಳಿದ್ದಾರೆ. ಇಂತಹ ಯುವ ಜನತೆ ನಿಗಮದ ಸವಲತ್ತು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು. ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.

ಚಿತ್ರದುರ್ಗ ಬೃಹನ್ಮಠದ ಬಸವ ಮಾಚಿದೇವ ಸ್ವಾಮೀಜಿ, ಸಾಮಾಜಿಕ ಸ್ಥಾನ ಮಾನ, ನ್ಯಾಯಯುತ ಹಕ್ಕುಗಳಿಗಾಗಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಸಮುದಾಯದವರು ಉತ್ತಮ ಭವಿಷ್ಯಕ್ಕಾಗಿ ಸಂಘಟಿತರಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಲ್ಲಿ ಮಾತ್ರ ಜೀವನ ಬದಲಾಗುತ್ತದೆ ಎಂದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್.ರಘು ಕೌಟಿಲ್ಯ, ಗ್ರಾಮ ಪಂಚಾಯಿತಿಗಳಿಗೆ ಚುನಾಯಿತರಾಗಿರುವ ಸಮುದಾಯದ ಸದಸ್ಯರನ್ನು ಅಭಿನಂದಿಸಲಾಯಿತು.

ತಾಲ್ಲೂಕು ಮಡಿವಳ ಮಾಚಿದೇವ ಸಂಘದ ಅಧ್ಯಕ್ಷ ಜಿ.ಎ.ಹನುಮಂತರಾಯ, ಜಿಲ್ಲಾ ಉಪಾಧ್ಯಕ್ಷ ಶ್ರೀರಾಮಪ್ಪ, ಸಲಹಾ ಸಮಿತಿ ಗೌರವಾಧ್ಯಕ್ಷ ತಿಪ್ಪೇಲಿಂಗಪ್ಪ, ಅಧ್ಯಕ್ಷ ಸಿದ್ದರಾಮಪ್ಪ, ಕಾರ್ಯದರ್ಶಿ ಮುರಳಿ, ಸೂರ್ಯನಾರಾಯಣ, ಗಂಗಸಾಗರ ವಿಶ್ವನಾಥ್, ಶಿಕ್ಷಕ ರಾಮಪ್ಪ, ನಿವೃತ್ತ ಶಿಕ್ಷಕ ರಾಮಾಂಜಿನಪ್ಪ, ಹನುಮಂತರಾಜು, ಪುರಸಭೆ ಸದಸ್ಯೆ ಅನ್ನಪೂರ್ಣಮ್ಮ, ಪರಶುರಾಮಪ್ಪ, ಕಿರಣ್, ಅವಿನಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.