ADVERTISEMENT

ದೇವೇಗೌಡರ ಸೋಲೂ; ಸೂಪರ್‌ ಸೀಡ್ ರಾಜಕಾರಣವೂ

ಮುಂದುವರಿದ ಲೋಕಸಭಾ ಚುನಾವಣೆಯ ರಾಜಕೀಯ ವೈಷಮ್ಯ; ಮತ್ತೆ ಅಧ್ಯಕ್ಷರಾಗುವ ವಿಶ್ವಾಸದಲ್ಲಿ ರಾಜಣ್ಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 19:45 IST
Last Updated 21 ಜುಲೈ 2019, 19:45 IST
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಪ್ರಧಾನ ಕಚೇರಿ ಕಟ್ಟಡ
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಪ್ರಧಾನ ಕಚೇರಿ ಕಟ್ಟಡ   

ತುಮಕೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸೂಪರ್ ಸೀಡ್ ಮಾಡುವ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ರಾಜ್ಯ ಸರ್ಕಾರ ತೀವ್ರವಾದ ಪೆಟ್ಟು ನೀಡಿದೆ.

ನೋಟಿಸ್ ನೀಡದೆ, ಒಂದಿಷ್ಟು ಮುನ್ಸೂಚನೆ ಇಲ್ಲದೆಯೇ ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಿಸಿದೆ. ಒಂದೂವರೆ ದಶಕಗಳಿಗೂ ಹೆಚ್ಚು ಕಾಲದಿಂದಲೂ ಅನಭಿಷಕ್ತ ದೊರೆಯಂತೆ ಡಿಸಿಸಿ ಬ್ಯಾಂಕಿನ ಮೇಲೆ ರಾಜಣ್ಣ ಹಿಡಿತ ಸಾಧಿಸಿದ್ದರು.

ಅಪೆಕ್ಸ್ ಬ್ಯಾಂಕಿನ ವ್ಯವಹಾರಗಳ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಈ ವೇಳೆ ರಾಜಣ್ಣ, ದೇವೇಗೌಡರ ಪುತ್ರರಾದ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಹರಿಹಾಯ್ದಿದ್ದರು. ಅಪೆಕ್ಸ್ ಬ್ಯಾಂಕ್ ಸೂಪರ್ ಸೀಡ್ ಮಾಡುತ್ತಾರೆ ಎನ್ನುವ ಪುಕಾರು ಹೇರಳವಾಗಿತ್ತು. ಈ ನಡುವೆಯೇ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆಗಿದೆ.

ADVERTISEMENT

ಒಂದು ವರ್ಷದವರೆಗೂ ಬ್ಯಾಂಕಿಗೆ ಆಡಳಿತಾಧಿಕಾರಿ ನೇಮಿಸಿರುವುದರ ಹಿಂದೆಯೂ ರಾಜಕೀಯ ಕುತಂತ್ರ ಅಡಗಿದೆ. ಮೈತ್ರಿ ಸರ್ಕಾರ ಒಂದು ವೇಳೆ ಪತನವಾಗಿ, ಮಧ್ಯಂತರ ಚುನಾವಣೆ ಸಂದರ್ಭಗಳೇ ಎದುರಾದರೆ ರಾಜಣ್ಣ ಪ್ರಭಾವ ನಡೆಯಬಾರದು ಎಂಬುದು ಹಿಂದಿನ ಉದ್ದೇಶವಾಗಿದೆ ಎಂದು ರಾಜಣ್ಣ ಆಪ್ತರು ಹೇಳುತ್ತಿದ್ದಾರೆ.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿರುದ್ಧ ರಾಜಣ್ಣ ಪದೇ ಪದೇ ಟೀಕೆ ಮಾಡುತ್ತಿದ್ದರು. ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ ಅವರು ಕಣಕ್ಕಿಳಿಯುತ್ತಾರೆ ಎಂಬ ಸುಳಿವು ಸಿಕ್ಕಾಗ ಅವರ ವಿರುದ್ಧ ನಾನೇ ಅಭ್ಯರ್ಥಿ ಎಂದು ಬಹಿರಂಗ ಘೋಷಿಸಿದ್ದರು.

ಅಷ್ಟೇ ಅಲ್ಲ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿಯೂ ಬಿಟ್ಟಿದ್ದರು. ಬಳಿಕ ಪಕ್ಷದ ವರಿಷ್ಠರ ಸೂಚನೆ, ಮನವಿ ಮೇರೆ ನಾಮಪತ್ರ ಹಿಂದಕ್ಕೆ ಪಡೆದಿದ್ದರು. ನಂತರ ಚುನಾವಣೆ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರಲಿಲ್ಲ. ಅಲ್ಲದೆ ಚುನಾವಣೆ ಸಮಯದಲ್ಲಿ ದೇವೇಗೌಡರ ವಿರುದ್ಧ ಪದೇ ಪದೇ ಟೀಕೆಗಳ ಸುರಿಮಳೆಗೈಯುತ್ತಿದ್ದರು.

ಮಧುಗಿರಿ ಇತಿಹಾಸದಲ್ಲಿಯೇ ಬಿಜೆಪಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಬಸವರಾಜು ಅವರ ಗೆಲುವಿಗೆ ರಾಜಣ್ಣ ನೆರವಾದರು ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಡಾ.ಜಿ.ಪರಮೇಶ್ವರ ವಿರುದ್ಧ ಜೀರೊ ಟ್ರಾಫಿಕ್ ಎಂಬ ಪದ ಬಳಸಿದ್ದರು. ಇದೆಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸಿದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈಗ ಡಿಸಿಸಿ ಬ್ಯಾಂಕ್‌ ಸೂಪರ್ ಸೀಡ್ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ತಮಗೆ ಕೈಕೊಟ್ಟಿದ್ದಕ್ಕೆ ರಾಜಣ್ಣ ಅವರ ಅಬ್ಬರಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಸಹಕಾರ ಶಕ್ತಿಯೇ ರಾಜಣ್ಣ ಶಕ್ತಿ: ಸಹಕಾರಿ ರಂಗದ ಮೂಲಕವೇ ರಾಜಣ್ಣ ಪ್ರವರ್ಧಮಾನಕ್ಕೆ ಬಂದವರು. ರೈತರು, ಗ್ರಾಹಕರು, ಸಹಕಾರ ಸಂಘಗಳಿಗೆ, ಸ್ವಸಹಾಯ ಸಂಘಗಳಿಗೆ, ಅಶಕ್ತರಿಗೆ ಬ್ಯಾಂಕಿನಿಂದ ನೆರವನ್ನು ಕಲ್ಪಿಸಿ, ಅವರ ಅಭಿವೃದ್ಧಿಗೆ ರಾಜಣ್ಣ ಶ್ರಮಿಸಿದ್ದಾರೆ. ಸಹಜವಾಗಿ ಅವರ ಬಲ ರಾಜಣ್ಣ ಅವರಿಗೆ ಇದೆ. ಈ ಬಲ ಕುಗ್ಗಿಸಿ ರಾಜಣ್ಣ ಅವರನ್ನು ಮೂಲೆಗುಂಪು ಮಾಡುವ ಹುನ್ನಾರ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆದೇಶದ ಹಿಂದೆ ಇದೆ ಎಂದು ರಾಜಣ್ಣ ಅವರ ಬೆಂಬಲಿಗರು ಆರೋಪಿಸುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಭೇಟಿ: ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರನ್ನು ಸೋಲಿಸಲು, ಮೈತ್ರಿ ಸರ್ಕಾರವನ್ನು ಉರುಳಿಸಲು ರಮೇಶ್ ಜಾರಕಿಹೊಳಿ ಅವರ ರೂಪಿಸಿದ ತಂತ್ರಕ್ಕೆ ಕೆ.ಎನ್.ರಾಜಣ್ಣ ಮತ್ತು ಅವರ ಮಗ ರಾಜೇಂದ್ರ ಕೈ ಜೋಡಿಸಿದ್ದರು. ರಾಜೇಂದ್ರ ಅವರು ರಮೇಶ್ ಜಾರಕಿಹೊಳಿ ಅವರನ್ನು ಈ ಕುರಿತು ಅನೇಕ ಬಾರಿ ಭೇಟಿ ಮಾಡಿ ಚರ್ಚಿಸಿದ್ದರು. ಇದೂ ಕೂಡಾ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಗೆ ಕಾರಣ ಎಂಬ ಗುಲ್ಲು ಹರಿದಾಡುತ್ತಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.