ADVERTISEMENT

ತಿಪಟೂರು: 9 ದಶಕದ ನಂತರ ಗಾಂಧಿ ತಂಗಿದ್ದ ಮನೆ ಅಭಿವೃದ್ಧಿ

ಗಾಂಧಿ ಸ್ಮಾರಕ, ಗ್ರಂಥಾಲಯವಾಗಿ ಪರಿವರ್ತನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 5:52 IST
Last Updated 2 ಅಕ್ಟೋಬರ್ 2024, 5:52 IST
ತಿಪಟೂರಿನಲ್ಲಿನ ಗಾಂಧಿ ಸ್ಮಾರಕ, ಗ್ರಂಥಾಲಯ
ತಿಪಟೂರಿನಲ್ಲಿನ ಗಾಂಧಿ ಸ್ಮಾರಕ, ಗ್ರಂಥಾಲಯ   

ತಿಪಟೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ತಾಲ್ಲೂಕಿನ ಜನರಿಗೆ ಕರೆ ನೀಡಲು ಬಂದಿದ್ದ ಮಹಾತ್ಮ ಗಾಂಧೀಜಿ ಅವರು ಉಳಿದುಕೊಂಡಿದ್ದ ಮನೆಯನ್ನು ಅಭಿವೃದ್ಧಿಪಡಿಸಿ ಗಾಂಧಿ ಸ್ಮಾರಕ, ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದೆ.

1927ರ ಆಗಸ್ಟ್‌ 21ರಂದು ನಗರದ ಈಗಿನ ಜಯದೇವ ಆಸ್ಪತ್ರೆ ಬಳಿ ತಾಲ್ಲೂಕಿನ ಜನರನ್ನು ಉದ್ದೇಶಿಸಿ ಭಾಷಣ ಗಾಂಧೀಜಿ ಮಾಡಿದ್ದರು. ನಂತರ ಹಳೆಯ ಬಿಡಿಒ ಕಚೇರಿ ಹಿಂಭಾಗ ಅಂದರೆ ಈಗಿನ ತಾಲ್ಲೂಕು ಪಂಚಾಯಿತಿಯ ಆವರಣದಲ್ಲಿನ ಮನೆಯೊಂದರಲ್ಲಿ ಉಳಿದುಕೊಂಡಿದ್ದರು. ಸ್ನಾನ ಮಾಡಿ ಸಿದ್ಧಗೊಳ್ಳಲು ಇಲ್ಲಿನ ಬಾವಿ ನೀರನ್ನು ಬಳಸಿಕೊಂಡಿದ್ದರು ಎಂದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ.

ಆನಂತರದ ದಿನಗಳಲ್ಲಿ ಈ ಮನೆ ಬಗ್ಗೆ ಯಾರೂ ಕಾಳಜಿ ವಹಿಸದೆ ಶಿಥಿಲಾವಸ್ಥೆ ತಲುಪಿತ್ತು. ಎರಡು ವರ್ಷದ ಹಿಂದೆ ಈ ಬಗ್ಗೆ ವರದಿ ಮಾಡಿದ ಪರಿಣಾಮ ಸ್ಥಳದ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿತ್ತು.

ADVERTISEMENT

ಕಳೆದ ವರ್ಷ ಶಾಸಕ ಕೆ.ಷಡಕ್ಷರಿ ಗಾಂಧೀಜಿ ತಂಗಿದ್ದ ಸ್ಥಳದ ಅಭಿವೃದ್ಧಿ ಪಡಿಸಲು ಯೋಜಿಸಿದ್ದರು. ಸ್ಮಾರಕ ಹಾಗೂ ಪ್ರತಿನಿತ್ಯ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗಬೇಕು ಎಂಬ ಉದ್ದೇಶದಿಂದ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ದಾನಿಗಳ ಕೊಡುಗೆಯಿಂದಾಗಿ ಈ ಮನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸಬರಮತಿ ಆಶ್ರಮದ ಮಾದರಿಯಲ್ಲಿ ಗಾಂಧೀಜಿ ಜೀವನ ಚರಿತ್ರೆ ಸಾರುವ ಚಿತ್ರಗಳ ಪ್ರದರ್ಶನ, ಗಾಂಧೀಜಿ ಅವರ ಖಾದಿ ಉತ್ಪಾದನೆಯ ಚರಕ, ಗಾಂಧೀಜಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಟ್ಟು ಗ್ರಂಥಾಲಯ ನಿರ್ಮಿಸಲಾಗಿದೆ.

ಗಾಂಧೀಜಿ ತಿಪಟೂರಿಗೆ ಭೇಟಿ ನೀಡಿ ತಂಗಿದ್ದ ಸ್ಥಳವನ್ನು ಸ್ಮಾರಕ ಮಾಡಿ ಇಂದಿನ ಯುವಜನರಿಗೆ ಗಾಂಧೀಜಿ ಚಿಂತನೆಗಳನ್ನು ಅಳವಡಿಸುವುದು ಸೂಕ್ತ ಎಂಬ ಅಭಿಪ್ರಾಯದ ಮೇರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ.

ಗಾಂಧೀಜಿ ತಂಗಿದ್ದ ಮನೆ
ತಿಪಟೂರಿಗೆ ಗಾಂಧೀಜಿ ಬಂದು ತಂಗಿದ್ದರು ಎಂಬ ಅರಿವು ಹಾಗೂ ಅವರ ವಿಚಾರಧಾರೆಗಳನ್ನು ತಿಳಿಸುವ ಚಿತ್ರಗಳು ಪುಸ್ತಕಗಳ ಸಂಗ್ರಹವನ್ನು ಗ್ರಂಥಾಲಯದಲ್ಲಿ ಇಡಲಾಗಿದೆ
ಸುದರ್ಶನ್ ಎಚ್.ಎಂ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.