ADVERTISEMENT

ಹಳ್ಳಿ ಮಕ್ಕಳಿಗೆ ನೀಟ್‌ನಿಂದ ತೊಡಕು: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 9:37 IST
Last Updated 25 ಆಗಸ್ಟ್ 2024, 9:37 IST
<div class="paragraphs"><p>ಜೆ.ಸಿ.ಮಾಧುಸ್ವಾಮಿ</p></div>

ಜೆ.ಸಿ.ಮಾಧುಸ್ವಾಮಿ

   

ದಾವಣಗೆರೆ: ವೈದ್ಯಕೀಯ ಶಿಕ್ಷಣ ಪಡೆಯುವ ಆಕಾಂಕ್ಷೆ ಹೊಂದಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ‘ನೀಟ್‌’ ತೊಡಕಾಗುತ್ತಿದೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೂ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲು ಹಳ್ಳಿ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ನಾನು ‘ನೀಟ್‌’ ಪರೀಕ್ಷೆಯನ್ನು ವಿರೋಧಿಸುತ್ತಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಸಾಮರ್ಥ್ಯ ಬೆಳೆದ ಬಳಿಕ ಇಂತಹ ವ್ಯವಸ್ಥೆಯೊಂದು ಮುನ್ನೆಲೆಗೆ ಬಂದಿದೆ. ದೊಡ್ಡ ನಗರಗಳಲ್ಲಿ ಶಿಕ್ಷಣ ಹಾಗೂ ವಿಶೇಷ ತರಬೇತಿ ಪಡೆದ ವಿದ್ಯಾರ್ಥಿಗಳು ಮಾತ್ರ ‘ನೀಟ್‌’ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ಸೃಷ್ಟಿಸುವುದು ಸಮಾಜವಾದದ ಆಶಯ. ಶಿಕ್ಷಣದಲ್ಲಿ ಇದು ಸಾಧ್ಯವಾಗುತ್ತಿಲ್ಲ’ ಎಂದರು.

‘ಪಿಯು ಪರೀಕ್ಷೆಯಲ್ಲಿ ಶೇ 99 ಅಂಕ ಗಳಿಸಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬರು ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ತೋರಲಿಲ್ಲ. ಈ ಶಿಕ್ಷಣ ಕೈಗೆಟಕುವುದಿಲ್ಲ ಎಂಬುದು ಮಕ್ಕಳಿಗೂ ಅರ್ಥವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದವರು ನಿಜವಾದ ಶೋಷಿತರಾಗುತ್ತಿದ್ದಾರೆ. ಸಮಾಜದಲ್ಲಿ ವರ್ಗ ತಾರತಮ್ಯ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.