ತುಮಕೂರು: ಇತ್ತೀಚೆಗೆ ಸೈಬರ್ ವಂಚಕರು ತಮ್ಮ ವಂಚನೆಯ ಮಾರ್ಗ ಬದಲಾಯಿಸಿದ್ದು, ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಹಣ ಸುಲಿಗೆ ಮಾಡುತ್ತಿದ್ದಾರೆ.
‘ನೀವು ಕಳುಹಿಸಿದ ಕೊರಿಯರ್‌ನಲ್ಲಿ 350 ಗ್ರಾಂ ಎಂಡಿಎಂಎ ಮಾದಕ ವಸ್ತು ಇದ್ದು, ನಿಮ್ಮ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲಾಗಿದೆ’ ಎಂದು ಹೆದರಿಸಿ ನಗರದ ವಿದ್ಯಾನಗರದ ಎಂಜಿನಿಯರ್ ಜಿ.ವಿಜಯಾಧಿತ್ಯ ಪಾಟೀಲ್ ಎಂಬುವರಿಗೆ ₹33.99 ಲಕ್ಷ ವಂಚಿಸಲಾಗಿದೆ.
ನ. 13ರಂದು ಕರೆ ಮಾಡಿದ ವಂಚಕರು ಮುಂಬೈನ ‘ಫೆಡೆಕ್ಸ್ ಕೊರಿಯರ್ ಸರ್ವೀಸ್’ನವರು ಎಂದು ಪರಿಚಯಿಸಿಕೊಂಡಿದ್ದಾರೆ. ಸಂಜೆ ಮತ್ತೊಬ್ಬರು ಕರೆ ಮಾಡಿ ‘ಮುಂಬೈ ಸೈಬರ್ ಸೆಲ್’ನಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದಾರೆ. ನೀವು ಮುಂಬೈನಿಂದ ಇರಾನ್‌ಗೆ ಕಳುಹಿಸುತ್ತಿದ್ದ ಪಾರ್ಸಲ್ ತಡೆಯಲಾಗಿದೆ. ಅದರಲ್ಲಿ 5 ಪಾಸ್‌ಪೋರ್ಟ್, ಎಂಡಿಎಂಎ ಪತ್ತೆಯಾಗಿದೆ. ಎಫ್‌ಐಆರ್ ಕೂಡ ದಾಖಲಾಗಿದೆ. ವಿಚಾರಣೆಗೆ ‘ಸ್ಕೈಪ್’ನಲ್ಲಿ ಕನೆಕ್ಸ್ ಆಗುವಂತೆ ಹೇಳಿದ್ದಾರೆ. ಪಾಟೀಲ್ ಸದರಿ ‘ಸ್ಕೈಪ್’ ಚಾಟ್‌ನಲ್ಲಿ ಎಟಿಎಂ, ಬ್ಯಾಂಕ್ ಖಾತೆ ಸೇರಿ ಅಗತ್ಯ ವಿವರ ಸಲ್ಲಿಸಿದ್ದಾರೆ.
ನ. 14ರಂದು ನಾವು ಒಂದು ಸುರಕ್ಷಿತ ಖಾತೆ ಕೊಡುತ್ತೇವೆ. ಅದಕ್ಕೆ ಹಣ ವರ್ಗಾಯಿಸಿ ತನಿಖೆ ಪೂರ್ಣಗೊಂಡ ನಂತರ ವಾಪಸ್ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಪಾಟೀಲ್ ₹33.99 ಲಕ್ಷ ಹಣವನ್ನು ಸೈಬರ್ ವಂಚಕರು ನೀಡಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಇದಾದ ನಂತರ ಗೂಗಲ್‌ನಲ್ಲಿ ‘ಮುಂಬೈ ಸೈಬರ್ ಸೆಲ್’ ಬಗ್ಗೆ ಮಾಹಿತಿ ಪಡೆದು ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹17 ಲಕ್ಷ ಕಳೆದುಕೊಂಡ ಯುವ ವಕೀಲ
ಆನ್‌ಲೈನ್‌ನಲ್ಲಿ ಕೆಲಸ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ವಕೀಲ ವೃತ್ತಿಯಲ್ಲಿ ತರಬೇತಿ ಪಡೆಯುತ್ತಿರುವ ಅಂತರಸನಹಳ್ಳಿ ಟಿ.ಡಿ.ಮಧು ಎಂಬುವರು ₹17.59 ಲಕ್ಷ ಕಳೆದುಕೊಂಡಿದ್ದಾರೆ. ಟ್ರಾವೆಲ್ ಸಿಟಿ ಎಂಬ ಕಂಪನಿಯು ‘ಟ್ರಾವೆಲ್ ರಿಮಾರ್ಕ್.ಕಮ್’ ಎಂಬ ವೆಬ್‌ಸೈಟ್‌ನಿಂದ ಕೆಲಸ ನೀಡುತ್ತಿದ್ದು ಇದಕ್ಕಾಗಿ ಹಣ ಜಮಾ ಮಾಡಬೇಕು ಎಂದು ತಿಳಿಸಿದ್ದರು.
ಅದರಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹1814606 ಹಣ ವರ್ಗಾವಣೆ ಮಾಡಿದ್ದು ಇದರಲ್ಲಿ ಕೇವಲ ₹55 ಸಾವಿರ ವಾಪಸ್ ಹಾಕಿದ್ದಾರೆ. ನಂತರ ವಂಚಿಸಿರುವುದು ಗೊತ್ತಾಗಿದೆ.
ಕೆಲಸ ಕೊಡುವುದಾಗಿ ನಂಬಿಸಿ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ನ. 7ರಂದು ಮೆಸೇಜ್ ಮಾಡಿದ ವಂಚಕರು ₹10 ಸಾವಿರ ವರ್ಗಾಯಿಸುವಂತೆ ಕೋರಿದ್ದರು. ಹಣ ಹಾಕಿದ ನಂತರ ಮಧು ಅವರ ಖಾತೆಗೆ ₹16 ಸಾವಿರ ವಾಪಸ್ ವರ್ಗಾಯಿಸಿದ್ದರು. 8ರಂದು ₹32 ಸಾವಿರ ಪಡೆದು ₹38 ಸಾವಿರ ಮರಳಿ ವರ್ಗಾವಣೆ ಮಾಡಿದ್ದರು. ಇದರಂತೆ ಹೆಚ್ಚು ಹಣ ಹೂಡಿದರೆ ದುಪ್ಪಟ್ಟು ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಮಧು ನ. 12ರ ವರೆಗೆ ಒಟ್ಟು ₹18 ಲಕ್ಷ ಹಣ ವರ್ಗಾಯಿಸಿ ಮೋಸ ಹೋಗಿದ್ದಾರೆ.
ಮದುವೆ ಆಮಂತ್ರಣ ನೀಡಿ ಹಣ ಸುಲಿಗೆ
ಅಪರಿಚಿತ ವ್ಯಕ್ತಿಗಳು ವಾಟ್ಸ್ ಆ್ಯಪ್‌ನಲ್ಲಿ ಮದುವೆ ಆಮಂತ್ರಣ ಪತ್ರದ ಜತೆಗೆ ‘ಎಪಿಕೆ’ ಫೈಲ್ ಲಿಂಕ್ ಕಳುಹಿಸಿ ಹಣ ಸುಲಿಗೆ ಮಾಡುತ್ತಿದ್ದು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಅಪರಿಚಿತರ ಸಂಖ್ಯೆಗಳಿಂದ ಮೊಬೈಲ್‌ಗೆ ಬರುವ ಆಮಂತ್ರಣವು ಸೈಬರ್ ದಾಳಿಗೆ ಕಾರಣವಾಗುತ್ತಿದೆ. ಇದರಿಂದ ವೈಯಕ್ತಿಕ ಡೇಟಾ ಕದ್ದು ಹಣ ಸುಲಿಗೆ ಮಾಡುತ್ತಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.