ADVERTISEMENT

ಬದುಕಿಗೆ ಶ್ರದ್ಧೆ, ಸಂಸ್ಕೃತಿ ಮುಖ್ಯ: ಗುರುರಾಜ ಕರ್ಜಗಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 6:20 IST
Last Updated 24 ಡಿಸೆಂಬರ್ 2023, 6:20 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ನಡೆದ ವಿದ್ಯಾನಿಕೇತನ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ 50 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ಕೆ.ಎಸ್.ಮಧುರಾ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಶಾಸಕ‌ ಜಿ.ಬಿ.ಜ್ಯೋತಿಗಣೇಶ್, ಡಿಡಿಪಿಯು ಗಂಗಾಧರ್, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿ.ಜಯರಾಮರಾವ್&nbsp;ಇತರರು ಹಾಜರಿದ್ದರು</p></div>

ತುಮಕೂರಿನಲ್ಲಿ ಶನಿವಾರ ನಡೆದ ವಿದ್ಯಾನಿಕೇತನ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ 50 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ಕೆ.ಎಸ್.ಮಧುರಾ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಶಾಸಕ‌ ಜಿ.ಬಿ.ಜ್ಯೋತಿಗಣೇಶ್, ಡಿಡಿಪಿಯು ಗಂಗಾಧರ್, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿ.ಜಯರಾಮರಾವ್ ಇತರರು ಹಾಜರಿದ್ದರು

   

ತುಮಕೂರು: ಮಕ್ಕಳಲ್ಲಿ ಸಂಸ್ಕೃತಿ ಕಲಿಕೆಯ ಜತೆಗೆ ಶ್ರದ್ಧೆ ತುಂಬಿದರೆ ನಾಡು, ದೇಶ ಅದ್ಭುತವಾಗಿ ರೂಪುಗೊಳ್ಳುತ್ತದೆ. ಶಿಕ್ಷಕರು ಮಕ್ಕಳಲ್ಲಿ ಈ ಎರಡು ಗುಣಗಳನ್ನು ಬಿತ್ತಬೇಕು ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು.

ನಗರದಲ್ಲಿ ಶನಿವಾರ ನಡೆದ ವಿದ್ಯಾನಿಕೇತನ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಪ್ರತಿಯೊಂದು ಕೆಲಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡರೆ ಯಾವುದೂ ಕಷ್ಟವಲ್ಲ. ಮಕ್ಕಳಿಗೆ ಪರಂಪರೆ, ಸಂಸ್ಕೃತಿಯ ಬಗ್ಗೆ ತಿಳಿಸುವ ಕೆಲಸ ಮಾಡಬೇಕು. ಅವರಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಬೇಕು ಎಂದರು.

ನಿನ್ನೆಯ ಬಗ್ಗೆ ಚಿಂತೆಗಿಂತ ಭವಿಷ್ಯದ ಕುರಿತು ಚಿಂತನೆ ತುಂಬಾ ಮುಖ್ಯ. ಗತಿಸಿದ ದಿನಗಳಿಗಿಂತ ಭವಿಷ್ಯದಲ್ಲಿ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಪ್ರವಾಹದ ರೀತಿಯಲ್ಲಿ ಕಾಲ ಬದಲಾಗುತ್ತಿದೆ. ಆ ಪ್ರವಾಹಕ್ಕೆ ನಮ್ಮ ಸಂಸ್ಕೃತಿ, ಪರಂಪರೆ, ಜೀವನ ಪದ್ಧತಿ ಕೊಚ್ಚಿಕೊಂಡು ಹೋಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಒಂದು ಶಿಕ್ಷಣ ಸಂಸ್ಥೆ ನಡೆಸುವುದು ತುಂಬಾ ಕಷ್ಟ.‌ ಜಯರಾಮರಾವ್ ಅವರು ಅಂತಹ ಕಷ್ಟವನ್ನು ಸುಲಭವಾಗಿಸಿದ್ದಾರೆ. ಹಲವು ಏಳು-ಬೀಳುಗಳ ಮಧ್ಯೆ ಸಂಸ್ಥೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

ಶಾಸಕ‌ ಜಿ.ಬಿ.ಜ್ಯೋತಿಗಣೇಶ್, ‘ವಿದ್ಯಾನಿಕೇತನ ಸಂಸ್ಥೆಯನ್ನು 1971ರಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಆಂಧ್ರಪ್ರದೇಶದ ಶಿಕ್ಷಣ ಸಂಸ್ಥೆಗಳು ಬಂದು ಇಲ್ಲಿ ತಮ್ಮ ಶಾಖೆಗಳನ್ನು ಆರಂಭಿಸಿವೆ. ನಗರದ ಪ್ರಮುಖ ಸಂಸ್ಥೆಯಾದ ವಿದ್ಯಾನಿಕೇತನ ಮತ್ತಷ್ಟು ಉತ್ತುಂಗಕ್ಕೆ ಹೋಗಲಿ’ ಎಂದು ಆಶಿಸಿದರು.

ಡಿಡಿಪಿಯು ಗಂಗಾಧರ್, ‘ಶಿಕ್ಷಣದಿಂದ ಮಾತ್ರ ಉನ್ನತ ಸ್ಥಾನ ಪಡೆಯಲು ಸಾಧ್ಯ. ಬಾಲ್ಯದಲ್ಲಿಯೇ ಮಾನವೀಯ ಗುಣ, ಉತ್ತಮ‌ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ವಿದ್ಯಾನಿಕೇತನ ಶಾಲೆಯಲ್ಲಿ 50 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ಕೆ.ಎಸ್.ಮಧುರಾ ಅವರನ್ನು ಸನ್ಮಾನಿಸಲಾಯಿತು. ಶಾಲಾ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿ.ಜಯರಾಮರಾವ್, ಅಧ್ಯಕ್ಷ ಪಿ.ಪರಸ್ ಮಲ್, ಉಪಾಧ್ಯಕ್ಷ ಜಿ.ಆರ್.ಸುರೇಶ್, ಪದಾಧಿಕಾರಿಗಳಾದ ಟಿ.ಎನ್.ಚನ್ನಬಸವ ಪ್ರಸಾದ್, ಎಂ.ಆರ್.ಆನಂದರಾಮು, ಕೆ.ಜಿ.ಮುನಿಗಂಗಪ್ಪ, ಸುರೇಶ್ ಶಾ, ಕೆ.ವಿ.ಶ್ರೀನಿವಾಸ್, ಎಂ.ಎಸ್.ದಿನೇಶ್ ಜೈನ್, ಟಿ.ಆರ್.ಸಾಯಿಪ್ರಸಾದ್ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.