ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕೃತವಾಗಿದ್ದು, ಅಧ್ಯಕ್ಷ ಸ್ಥಾನ ಭದ್ರವಾಯಿತು. ಜಿ.ಪಂ ಪ್ರಸಕ್ತ ಸಾಲಿನ ಅಧಿಕಾರದ ಅವಧಿ ಮೂರು ತಿಂಗಳು ಮಾತ್ರ ಉಳಿದಿದ್ದು, ಅವರು ಈ ಅವಧಿಯನ್ನು ಪೂರೈಸಲಿದ್ದಾರೆ.
ಸೋಮವಾರ ಬೆಳಿಗ್ಗೆ 11ಕ್ಕೆ ಅವಿಶ್ವಾಸ ನಿರ್ಣಯ ಸಭೆ ನಿಗದಿ ಆಗಿತ್ತು. ಪ್ರಕ್ರಿಯೆಗಳನ್ನು ನಡೆಸಲು ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಿಂಗ್ ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಬಂದರು. ಈ ವೇಳೆ ಬಿಜೆಪಿ ಯಶೋದಮ್ಮ, ಮಹಾಲಿಂಗಯ್ಯ, ನರಸಿಂಹಮೂರ್ತಿ, ಜೆಡಿಎಸ್‌ನ ರಾಮಚಂದ್ರಪ್ಪ, ರಾಮಕೃಷ್ಣಪ್ಪ ಮಾತ್ರ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಪಾಲ್ಗೊಂಡರು.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ 30 ನಿಮಿಷಗಳ ಕಾಲ ಸದಸ್ಯರ ಹಾಜರಿಗೆ ಕಾಲಾವಕಾಶ ನೀಡಿದರು. 11.30 ಸಮಯವಾದರೂ ಕೋರಂಗೆ ಅಗತ್ಯ ಸಂಖ್ಯಾಬಲ ದೊರೆಯಲಿಲ್ಲ. ಜ. 18ರಂದು ಕರೆದಿದ್ದ ಅವಿಶ್ವಾಸ ನಿರ್ಣಯ ಸಭೆಯೂ ಕೋರಂ ಕೊರತೆ ಕಾರಣದಿಂದ ನಡೆದಿರಲಿಲ್ಲ.
ಆಗ, ‘ಅವಿಶ್ವಾಸ ನಿರ್ಣಯ ತಿರಸ್ಕೃತವಾಗಿದೆ’ ಎಂದು ಪ್ರಕಟಿಸಿ ಆಯುಕ್ತರು ಸಭೆಯಿಂದ ಹೊರನಡೆದರು.
ವಿಶ್ರಾಂತಿಗೃಹದಲ್ಲಿ ಸದಸ್ಯರು: ಕೆಂಚಮಾರಯ್ಯ, ಹುಚ್ಚಯ್ಯ, ಸಿದ್ದರಾಮಯ್ಯ ಸದಸ್ಯರ ವಿಶ್ರಾಂತಿ ಗೃಹದಲ್ಲಿ ಕುಳಿತು ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಸಭೆಯಲ್ಲಿ ಪಾಲ್ಗೊಳ್ಳದಂತೆ ಕಾಂಗ್ರೆಸ್ ತನ್ನ ಸದಸ್ಯರಿಗೆ ವಿಪ್
ನೀಡಿತ್ತು.
ನೋಟಿಸ್ ನೀಡದ ಜಿ.ಪಂ: ಜ. 25ರಂದು ಅವಿಶ್ವಾಸ ನಿರ್ಣಯ ಸಭೆ ನಡೆಯುತ್ತದೆ ಎಂದು ಜಿಲ್ಲಾ ಪಂಚಾಯಿತಿಯು ಸದಸ್ಯರಿಗೆ ನೋಟಿಸ್ ನೀಡಿಲ್ಲ. ಕರೆ ಮಾಡಿಯೂ ತಿಳಿಸಿಲ್ಲ. ಆದ ಕಾರಣ ಸದಸ್ಯರು ಸಭೆಗೆ ಬಂದಿಲ್ಲ. ನಾವು ಕರೆ ಮಾಡಿ ಕೇಳಿದಾಗ, ನಮಗೆ ಯಾವುದೇ ಮಾಹಿತಿ ಇಲ್ಲ. ನೋಟಿಸ್ ಕೊಟ್ಟಿಲ್ಲ ಎಂದು ಕೆಲವು ಸದಸ್ಯರು ತಿಳಿಸಿದರು ಎಂದು ಯಶೋದಮ್ಮ ಆರೋಪಿಸಿದರು.
ಕುದುರೆ ವ್ಯಾಪಾರ ನಡೆದಿದೆ: ಕೆಲವು ಸದಸ್ಯರಿಗೆ ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಿಂದ ದೂರ ಉಳಿಯುವಂತೆ ಹಣ ನೀಡಲಾಗಿದೆ ಎಂದು ಜ. 18ರ ಸಭೆಯಲ್ಲಿ ಮಹಾಲಿಂಗಯ್ಯ ಆರೋಪಿಸಿದ್ದರು. ಸೋಮವಾರವೂ ತಮ್ಮ ಈ ಮಾತನ್ನು ಒತ್ತಿ ಹೇಳಿದರು. ಇವರ ಆರೋಪಕ್ಕೆ ಮತ್ತಷ್ಟು ಸದಸ್ಯರು ಧ್ವನಿಗೂಡಿಸಿದರು.
₹ 1 ಲಕ್ಷದಿಂದ ಹಿಡಿದು ₹ 5 ಲಕ್ಷದವರೆಗೆ ಸದಸ್ಯರಿಗೆ ಪಕ್ಷಾತೀತವಾಗಿ ಹಣ ನೀಡಲಾಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಕೆಲವು ಸದಸ್ಯರಿಗೆ ಹಣ ನೀಡಲಾಗಿದೆ. ಈ ಮೊದಲು 51 ಮಂದಿ ಅವಿಶ್ವಾಸಕ್ಕೆ ಸಹಿ ಹಾಕಿದ್ದರು. ಆ ನಂತರ ಆ ಸಂಖ್ಯೆ ಕಡಿಮೆ ಆಯಿತು. ಇದಕ್ಕೆ ಕಾರಣ ಹಣ ಎಂದು ಸದಸ್ಯರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.