ಪಾವಗಡ: ಅಕ್ರಮ ಸಕ್ರಮದಡಿ ಜಮೀನುಗಳಲ್ಲಿ ವಿದ್ಯುತ್ ಪರಿವರ್ತಕ (ಟಿ.ಸಿ) ಅಳವಡಿಸಲು ಅಧಿಕಾರಿಗಳು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಹತ್ತು ವರ್ಷದ ಹಿಂದೆ ಯೋಜನೆ ಅಡಿ ಹಣ ಕಟ್ಟಿದವರಿಗೆ ಈವರೆಗೆ ಟಿ.ಸಿ ಅಳವಡಿಸಿಲ್ಲ. ಕೊಳವೆ ಬಾವಿ ಬತ್ತಿ ಹೋಗಿವೆ. ಅವರಿವರ ಬಳಿ ನೀರು ಬಿಡಿಸಿಕೊಂಡು ಬೆಳೆ ಬೆಳೆಯುವ ಪರಿಸ್ಥಿತಿ ಇದೆ. ಪ್ರಭಾವಿಗಳಿಗೆ, ಹಣ ನೀಡಿದವರಿಗೆ ಶೀಘ್ರ ಕೆಲಸ ಮಾಡಿಕೊಡಲಾಗುತ್ತಿದೆ ಎಂದು ರೈತರು ದೂರಿದ್ದಾರೆ.
ಯೋಜನೆಗೆ ಅರ್ಜಿ ಸಲ್ಲಿಸಿದ ರೈತರ ಜಮೀನುಗಳಲ್ಲಿ ಜ್ಯೇಷ್ಠತೆ (ಸೀನಿಯಾರಿಟಿ) ಆಧಾರದಲ್ಲಿ ವಿದ್ಯುತ್ ಸಂಪರ್ಕ ನೀಡಬೇಕು. ಜ್ಯೇಷ್ಠತೆ ಆಧಾರದಲ್ಲಿ ಕಾರ್ಯಾದೇಶ ನೀಡಿ, ಕೆಲಸ ಮಾಡಲು ಆದೇಶ ನೀಡಬೇಕು. ಆದರೆ ಜ್ಯೇಷ್ಠತೆ ಪಾಲಿಸದೆ ತಮಗೆ ಬೇಕಾದವರಿಗೆ, ಒತ್ತಡ ಹೇರಿದವರಿಗೆ, ಹಣ ನೀಡಿದವರಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂಬುದು ರೈತರ ಆರೋಪ.
ಕೆಲ ಗುತ್ತಿಗೆದಾರರು ಹಣ ಪಡೆದು ಅರ್ಧ ಕೆಲಸ ಮಾಡಿ ಸುಮ್ಮನಾಗುತ್ತಿದ್ದಾರೆ. ಕಂಬ ನಿಲ್ಲಿಸಿ ಪರಿವರ್ತಕ ಅಳವಡಿಸದೆ ವರ್ಷಗಳ ಕಾಲ ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ.
ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಭೂಪೂರು ಗ್ರಾಮದ ಚನ್ನಾರೆಡ್ಡಿ ಎಂಬ ರೈತರು 2014ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ಹತ್ತು ವರ್ಷ ಕಳೆದರೂ ಈವರೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಮಧುಗಿರಿ, ಪಟ್ಟಣದ ಬೆಸ್ಕಾಂ ಕಚೇರಿಗಳಿಗೆ ಅಲೆದು ಬೇಸತ್ತಿದ್ದಾರೆ. ಅವರ ನಂತರ ಅರ್ಜಿ ಹಾಕಿದವರಿಗೆ ಟಿ.ಸಿ ಅಳವಡಿಸಿ ಸಂಪರ್ಕ ನೀಡಲಾಗಿದೆ.
‘ನಾನು ಹಣ ಪಾವತಿಸಿದರೂ ಅನಗತ್ಯವಾಗಿ ಅಧಿಕಾರಿಗಳು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ’ ಎಂದು ರೈತ ಚನ್ನಾರೆಡ್ಡಿ ಅಳಲು ತೋಡಿಕೊಂಡರು.
ಅರ್ಜಿ ಸಲ್ಲಿಸಿ ₹33 ಸಾವಿರ ಪಾವತಿಸಿದ್ದೇನೆ. ಈವರೆಗೆ ಟಿ.ಸಿ ಅವಳವಡಿಸದೇ ನಿರ್ಲಕ್ಷ್ಯವಹಿಸಲಾಗಿದೆ. ಹಣ ನೀಡುವವರಿಗೆ ಕೆಲಸ ಮಾಡಿಕೊಡಲಾಗುತ್ತಿದೆ. ಸಾಮಾನ್ಯ ಜನರಿಗೆ ಇಲಾಖೆಯವರು ಕೆಲಸ ಮಾಡಿಕೊಡದೆ ಬೇಜವಾಬ್ಧಾರಿ ವಹಿಸುತ್ತಿದ್ದಾರೆ. ಕಂಬ, ತಂತಿ ಅಳವಡಿಸಿ ಎರಡು ವರ್ಷ ಕಳೆದಿದೆ. ವಿದ್ಯುತ್ ಕಂಬ ಬೀಳುವ ಹಂತ ತಲುಪಿದೆ ತಂತಿ ಹಾಳಾಗುತ್ತಿವೆ ಎಂದು ದೂರಿದರು.
ವಿದ್ಯುತ್ ಲೋಡ್ ಹೆಚ್ಚಿರುವ ಕಾರಣ ಮೋಟಾರ್, ಪಂಪ್‌ಸೆಟ್ ಸುಟ್ಟು ಹೋಗುತ್ತಿವೆ. ಸಾಲ ಮಾಡಿ ಮೋಟರ್ ದುರಸ್ತಿ ಮಾಡಿಸಬೇಕಿದೆ. ಕಚೇರಿ ಅಲೆದು ಅಲೆದು ಸಾಕಾಗಿದೆ. ಅಧಿಕಾರಿಗಳು, ಗುತ್ತಿಗೆದಾರರು ಸ್ಪಂದಿಸುತ್ತಿಲ್ಲಮಂಜುನಾಥ್, ಕಣಿವೇನಹಳ್ಳಿ
ಅಕ್ರಮ ಸಕ್ರಮದಡಿ ರೈತ 2014ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಾರಣಾಂತರದಿಂದ ಟಿ.ಸಿ ಅಳವಡಿಕೆ ತಡವಾಗಿದೆ. ಸೊಮವಾರದ ಒಳಗಾಗಿ ಟಿ.ಸಿ ಅಳವಡಿಸಿ, ವಿದ್ಯುತ್ ಸಂಪರ್ಕ ಕೊಡಿಸಲಾಗುವುದು.ಕೃಷ್ಣಮೂರ್ತಿ, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.