ತುಮಕೂರು: ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಶನಿವಾರ ಕ್ವಿಂಟಲ್‌ಗೆ ₹18 ಸಾವಿರಕ್ಕೆ ಹರಾಜು ಕೂಗಿದ್ದರೂ, ರೈತರಿಂದ ಖರೀದಿಸಿದ್ದು ಮಾತ್ರ ₹17 ಸಾವಿರಕ್ಕೆ!
ಹರಾಜಿನಲ್ಲಿ ಭಾಗವಹಿಸಿದ್ದ ವರ್ತಕರು ಒಂದು ಕ್ವಿಂಟಲ್‌ಗೆ ₹18 ಸಾವಿರಕ್ಕೆ ಕೂಗಿದರು. ಆದರೆ, ದಲ್ಲಾಳಿಗಳು ಅಷ್ಟು ಬೆಲೆ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ₹17 ಸಾವಿರಕ್ಕೆ ಖರೀದಿಸಲಾಯಿತು.
ಕ್ವಿಂಟಲ್‌ಗೆ ಗರಿಷ್ಠ ₹18 ಸಾವಿರ ಹಾಗೂ ಕನಿಷ್ಠ ₹15 ಸಾವಿರ, ಮಾದರಿ ₹16,666 ಬೆಲೆಗೆ ಹರಾಜು ಕೂಗಲಾಗಿದೆ. ಆದರೆ, ₹18 ಸಾವಿರ ಬೆಲೆ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ ಎಂದು ದಲ್ಲಾಳಿಗಳು ಖರೀದಿಗೆ ನಿರಾಕರಿಸಿದರು. ಇದರಿಂದಾಗಿ ರೈತರು ಹಾಗೂ ದಲ್ಲಾಳಿಗಳ ನಡುವೆ ವಾಗ್ವಾದ ನಡೆಯಿತು.
ಶಾಸಕ ಕೆ. ಷಡಕ್ಷರಿ, ಎಪಿಎಂಸಿ ಅಧಿಕಾರಿಗಳು, ವರ್ತಕರು, ದಲ್ಲಾಳಿಗಳು, ರೈತರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ₹17 ಸಾವಿರಕ್ಕೆ ಖರೀದಿಸಲು ಒಮ್ಮತಕ್ಕೆ ಬರಲಾಯಿತು.
ತಿಪಟೂರಿನ ಜಿ.ಆರ್. ಅಂಗಡಿಯಲ್ಲಿ ನಡೆಯುವ ಹರಾಜಿನಲ್ಲಿ ನಿಗದಿಪಡಿಸುವ ಬೆಲೆಯ ಆಧಾರದ ಮೇಲೆ ಇತರೆ ಮಂಡಿ ವರ್ತಕರು ದರ ನಿಗದಿಪಡಿಸಿ (ಸ್ವಲ್ಪ ಕಡಿಮೆ) ಕೊಬ್ಬರಿ ಖರೀದಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಅಂಗಡಿಯಲ್ಲಿ ಶನಿವಾರ ಗರಿಷ್ಠ ₹18 ಸಾವಿರಕ್ಕೆ ಹರಾಜು ಕೂಗಲಾಗಿದೆ. ಎಲ್ಲಾ ವರ್ತಕರು ಇದೇ ಬೆಲೆಗೆ ಕೊಬ್ಬರಿ ಖರೀದಿಸಬೇಕು ಎಂದು ರೈತರು ಪಟ್ಟು ಹಿಡಿದರು. ಇದಕ್ಕೆ ವರ್ತಕರು ಒಪ್ಪದಿದ್ದಾಗ ಸಂಧಾನ ಸಭೆ ನಡೆಸಿ, ಬೆಲೆ ನಿಗದಿಪಡಿಸಲಾಯಿತು.
ಸೆ.11ರಂದು ಕ್ವಿಂಟಲ್‌ಗೆ ₹15 ಸಾವಿರಕ್ಕೆ ಹೆಚ್ಚಳವಾಗಿತ್ತು. ನಂತರದ ದಿನಗಳಲ್ಲಿ ಬೆಲೆ ಕುಸಿದಿತ್ತು. ಕಳೆದ ಬುಧವಾರದ ಹರಾಜಿನಲ್ಲಿ ₹14,446ಕ್ಕೆ ಏರಿಕೆಯಾಗಿತ್ತು. ಮೂರು ದಿನದ ಅಂತರದಲ್ಲಿ ₹3,500 ಹೆಚ್ಚಳ ಆದಂತಾಗಿದೆ.
2015ರ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ದಾಖಲೆಯ ₹19,600ಕ್ಕೆ ಹೆಚ್ಚಳವಾಗಿತ್ತು. ಕೋವಿಡ್‌ಗೆ ಮುನ್ನ ₹15 ಸಾವಿರದ ವರೆಗೂ ತಲುಪಿತ್ತು. ನಂತರದ ದಿನಗಳಲ್ಲಿ ಧಾರಣೆ ತೀವ್ರವಾಗಿ ಕುಸಿದು, ₹8 ಸಾವಿರಕ್ಕೆ ತಲುಪಿತ್ತು. ಒಂದು ತಿಂಗಳಿಂದ ನಿಧಾನವಾಗಿ ಏರಿಕೆಯತ್ತ ಮುಖ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.