ತುಮಕೂರು: ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿರುವ ಬೆಂಗಳೂರು ವಿಭಾಗ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ತುಮಕೂರು, ದಾವಣಗೆರೆ, ಬೆಂಗಳೂರು ದಕ್ಷಿಣ ಹಾಗೂ ಚಿತ್ರದುರ್ಗ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.
ನಗರದ ಸರ್ವೋದಯ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ 14 ಮತ್ತು 17 ವರ್ಷ ವಯೋಮಿತಿಯ ಬಾಲಕ–ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಪಂದ್ಯಾವಳಿ ಆರಂಭವಾಯಿತು.
ಬೆಂಗಳೂರು ದಕ್ಷಿಣದ ಬಾಲಕರು ಮೊದಲ ಪಂದ್ಯದಲ್ಲಿ ಸುಲಭವಾಗಿ 17-8ರಿಂದ ಕೋಲಾರ ತಂಡವನ್ನು ಮಣಿಸಿದರು. ಗೆಲುವಿನ ಓಟ ಮುಂದುವರೆಸಿದ ತಂಡ ಒಂದು ಅಂಕದಿಂದ ಶಿವಮೊಗ್ಗ ತಂಡಕ್ಕೆ ಸೋಲುಣಿಸಿ ಸೆಮಿಫೈನಲ್ ತಲುಪಿತು. ಆತಿಥೇಯ ತುಮಕೂರು ತಂಡ ಮಧುಗಿರಿ ತಂಡದ ವಿರುದ್ಧ ಇನ್ನಿಂಗ್ಸ್ ಮತ್ತು 3 ಅಂಕಗಳಿಂದ ಜಯಿಸಿತು. ಸುಲೇಮಾನ್ ದಾಳಿಯಲ್ಲಿ ಮತ್ತು ಯಶ್ವಂತ್ ರಕ್ಷಣೆಯಲ್ಲಿ ಮಿಂಚಿದರು.
ಸೆಮಿಫೈನಲ್ಸ್‌ನಲ್ಲಿ ಬೆಂಗಳೂರು ದಕ್ಷಿಣ ಮತ್ತು ದಾವಣಗೆರೆ ತಂಡಗಳು ಮುಖಾಮುಖಿಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ತುಮಕೂರು ತಂಡ ಚಿತ್ರದುರ್ಗ ತಂಡವನ್ನು ಎದುರಿಸಲಿದೆ. ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ, ದಾವಣಗೆರೆ, ಶಿವಮೊಗ್ಗ ಹಾಗೂ ತುಮಕೂರು ತಂಡಗಳು ಸೆಮಿಫೈನಲ್ ತಲುಪಿದವು.
14ರ ವಯೋಮಿತಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಮತ್ತು ಉತ್ತರ, ತುಮಕೂರು, ಕೋಲಾರ ತಂಡಗಳು ನಾಲ್ಕರ ಘಟ್ಟ ತಲುಪಿದವು. ಶುಕ್ರವಾರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.