ADVERTISEMENT

ತುಮಕೂರು | ಷೇರು ಮಾರುಕಟ್ಟೆ ಲಾಭದ ಆಮಿಷ: ವೈದ್ಯ ದಂಪತಿಗೆ ₹12.46 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 4:20 IST
Last Updated 2 ಜುಲೈ 2024, 4:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಸೈಬರ್‌ ಆರೋಪಿಗಳು ‘ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸಬಹುದು’ ಎಂಬ ಆಸೆ ತೋರಿಸಿ ವೈದ್ಯ ದಂಪತಿಗೆ ₹12.46 ಲಕ್ಷ ವಂಚಿಸಿದ್ದಾರೆ.

ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಡಾ.ಎಸ್‌.ಕುಲಕರ್ಣಿ, ಡಾ.ಪ್ರಿಯಾಂಕಾ ಕುಲಕುರ್ಣಿ ಅವರು ಲಾಭದ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ.

ವಾಟ್ಸ್‌ ಆ್ಯಪ್‌ ಮುಖಾಂತರ ಪರಿಚಯಿಸಿಕೊಂಡ ವಂಚಕರು ಈ ಇಬ್ಬರನ್ನು ಒಂದು ಗ್ರೂಪ್‌ಗೆ ಸೇರಿಸಿದ್ದಾರೆ. ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸ್ವಲ್ಪ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದ್ದಾರೆ. ನಂತರ ‘ಜಿಯೋಪ್ಟೊ ಕ್ರಪ್ಟೊ ಟ್ರೇಡಿಂಗ್‌’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಹೇಳಿದ್ದಾರೆ.

ADVERTISEMENT

ಎಸ್‌.ಕುಲಕರ್ಣಿ ದಂಪತಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಹಣ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಪ್ರಾರಂಭದಲ್ಲಿ ಅವರಿಗೆ ₹826 ಲಾಭಾಂಶ ಎಂದು ವಾಪಸ್‌ ಹಾಕಿದ್ದಾರೆ. ಇದನ್ನು ನಂಬಿದ ಇಬ್ಬರು ತಮ್ಮ ಖಾತೆಗಳಿಂದ ಸೈಬರ್‌ ಕಳ್ಳರು ತಿಳಿಸಿದ ವಿವಿಧ ಖಾತೆಗಳಿಗೆ ಏ. 10ರಿಂದ ಜೂನ್‌ 13ರ ವರೆಗೆ ಹಂತ ಹಂತವಾಗಿ ₹12.46 ಲಕ್ಷ ವರ್ಗಾವಣೆ ಮಾಡಿದ್ದಾರೆ.

ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಹಣದ ಬಗ್ಗೆ ಮಾಹಿತಿ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅನುಮಾನಗೊಂಡು ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.