ತುಮಕೂರು: ತಿಪಟೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರೊಬ್ಬರು ಪಾನಮತ್ತರಾಗಿ ಮಲಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸೋಮವಾರ ಮಧ್ಯಾಹ್ನ ಹೊರ ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿದ್ದಾಗಲೇ ದಂತ ವಿಭಾಗದ ಡಾ.ಜಯಪ್ರಕಾಶ್ ಮದ್ಯಪಾನ ಮಾಡಿ ಟೇಬಲ್ ಮೇಲೆ ಕಾಲಿಟ್ಟು ಕುರ್ಚಿಯಲ್ಲಿಯೇ ಮಲಗಿದ್ದರು.
ಮಾತನಾಡಲು ಪ್ರಯತ್ನಿಸಿದ ರೋಗಿಗಳನ್ನು ಹೊರ ಹೋಗುವಂತೆ ವೈದ್ಯ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಚಿಕಿತ್ಸೆಗೆ ಬಂದವರೊಬ್ಬರು ಮೊಬೈಲ್‌ನಲ್ಲಿ ಈ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ಮೊದಲು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಮದ್ಯಪಾನ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದರು. ವರ್ಷದ ಹಿಂದೆ ಅವರನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು.
‘ವೈದ್ಯರ ವರ್ತನೆಯನ್ನು ಆರೋಗ್ಯ ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗಿದೆ. ಈ ಕುರಿತು ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಡಿಎಚ್‌ಒ ಡಾ.ಡಿ.ಎನ್. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.