ADVERTISEMENT

ಕುಸಿದ ಅಂತರ್ಜಲ: ಬತ್ತಿದ ಜಲಮೂಲ

ಸಿರಿಧಾನ್ಯಗಳ ನೆಲದಲ್ಲಿ ಹೆಚ್ಚಿದ ಅಡಿಕೆ ಪ್ರೀತಿ: ಬೆಳೆಗೆ ನೀರಿಲ್ಲದೆ ಹೈರಾಣಾದ ರೈತ

ಆರ್.ಸಿ.ಮಹೇಶ್
Published 10 ಮಾರ್ಚ್ 2024, 6:35 IST
Last Updated 10 ಮಾರ್ಚ್ 2024, 6:35 IST
ಹುಳಿಯಾರು ಹೋಬಳಿ ವ್ಯಾಪ್ತಿಯ ಗುರುವಾಪುರ ಗ್ರಾಮದಲ್ಲಿ ಅಡಿಕೆ ಬೆಳೆಗೆ ಟ್ಯಾಂಕರ್‌ ಮೂಲಕ ನೀರು ಹಾಯಿಸುತ್ತಿರುವುದು
ಹುಳಿಯಾರು ಹೋಬಳಿ ವ್ಯಾಪ್ತಿಯ ಗುರುವಾಪುರ ಗ್ರಾಮದಲ್ಲಿ ಅಡಿಕೆ ಬೆಳೆಗೆ ಟ್ಯಾಂಕರ್‌ ಮೂಲಕ ನೀರು ಹಾಯಿಸುತ್ತಿರುವುದು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದಿದ್ದು, ಕೊಳವೆಬಾವಿಗಳು ಬತ್ತುತ್ತಿವೆ. ಎರಡು ವರ್ಷದ ಹಿಂದೆ ಬಿದ್ದ ಉತ್ತಮ ಮಳೆ ಹಾಗೂ ತಾಲ್ಲೂಕಿಗೆ ಹರಿದ ಹೇಮಾವತಿ ನೀರನ್ನು ನಂಬಿ ಅಡಿಕೆ ನಾಟಿ ಮಾಡಿದ್ದ ರೈತರು ಸದ್ಯದ ಸಂಕಷ್ಟದಿಂದ ಪಾರಾಗಲು ರೈತರು ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ.

ನೀರಿನ ಕೊರತೆ ಜತೆ ವಿದ್ಯುತ್‌ ಸರಬರಾಜು ವ್ಯತ್ಯಯ, ಬಿಸಲಿನ ಝಳ ರೈತರನ್ನು ಹೈರಾಣಾಗಿಸಿದೆ. ಅಡಿಕೆ, ತೆಂಗಿನ ತೋಟಗಳಿಗೆ ನೀರುಣಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕೇವಲ ತೆಂಗಿನ ತೋಟಗಳನ್ನು ನಂಬಿಕೊಂಡಿದ್ದ ಈ ಭಾಗದ ರೈತರು ಅಧಿಕ ಲಾಭ ಕೊಡುವ ಅಡಿಕೆ ಕೃಷಿಯತ್ತ ವಾಲಿದ ಪರಿಣಾಮ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಬೆಟ್ಟಗುಡ್ಡಗಳಿಂದ ಕೂಡಿರುವ ಪ್ರದೇಶದಲ್ಲಿ ಹಳ್ಳ ಹರಿಯುವ ಜಾಗಗಳಲ್ಲಿ ತೆಂಗು ಬೆಳೆಯುತ್ತಿದ್ದ ರೈತರು ನಂತರ ಬೆಟ್ಟಗುಡ್ಡಗಳ ಮೇಲೂ ಬೆಳೆಸಲು ಮುಂದಾದರು. ನಂತರ ದಿನಗಳಲ್ಲಿ ಅಡಿಕೆ ಬೆಳೆ ವ್ಯಾಪಿಸಿತು. ಸಿರಿಧಾನ್ಯ ಕಣಜವೆಂದೇ ಪ್ರಖ್ಯಾತಿಯಾಗಿದ್ದ ಬಯಲು ಸೀಮೆಯಲ್ಲಿ ಅತಿ ಹೆಚ್ಚು ನೀರು ಬಯಸುವ ಅಡಿಕೆ ಬೆಳೆದು ಹೈರಾಣಾಗಿದ್ದಾರೆ.

ADVERTISEMENT

ಮೂರು ದಶಕಗಳಿಂದ ಆರಂಭವಾದ ಕೊಳವೆಬಾವಿ ಸಂಸ್ಕೃತಿ ಅಂತರ್ಜಲ ಕುಸಿದಿದೆ.

ಹೇಮಾವತಿ ಮಾಡಿದ ಮೋಡಿ: ಎರಡು ದಶಕದ ಹೋರಾಟದ ಫಲವಾಗಿ 2022ರಲ್ಲಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ಹೇಮಾವತಿ ನೀರು ಹರಿದಿತ್ತು. ಶೆಟ್ಟಿಕೆರೆ ಹೋಬಳಿ ಮೂಲಕ ಹುಳಿಯಾರು ಭಾಗಕ್ಕೂ ನೀರು ಬಂದಿತ್ತು. ಅದೇ ವರ್ಷ ಸುರಿದ ಮಳೆಗೆ ತಾಲ್ಲೂಕು ವ್ಯಾಪ್ತಿಯ 57 ಕೆರೆ ಕೋಡಿ ಹರಿದು ಬೋರನಕಣಿವೆ ಜಲಾಶಯ ಕೋಡಿ ಬಿದ್ದಿತ್ತು. ಇದರಿಂದ ಅಡಿಕೆ ನಾಟಿ ಹೆಚ್ಚಿತ್ತು. 12 ವರ್ಷದ ಹಿಂದೆ ಒಂದು ಹೆಕ್ಟೇರ್‌ ವಿಸ್ತೀರ್ಣ ಹೊಂದಿದ್ದ ಅಡಿಕೆ ಬೆಳೆ 2022ರ ವೇಳೆಗೆ ಏಳು ಸಾವಿರ ಹೆಕ್ಟೇರ್‌ ವಿಸ್ತೀರ್ಣಕ್ಕೆ ಏರಿಕೆಯಾಗಿತ್ತು. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ 2022ರಲ್ಲಿ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ನಾಟಿಯಾಗಿತ್ತು.

ಬೋರನಕಣಿವೆ ಬುಡದಲ್ಲೇ ನೀರಿಗೆ ಬರ: ತಾಲ್ಲೂಕಿನ ಜನರ ಜೀವನಾಡಿ ಬೋರನಕಣಿವೆ ಜಲಾಶಯದಲ್ಲಿ 25 ಅಡಿಯಷ್ಟು ನೀರಿದ್ದರೂ ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಆರಂಭವಾಗಿದೆ. ನೀರು ಹರಿಯುವ ಬೆಳ್ಳಾರ ಗ್ರಾಮದ ಸುತ್ತಮುತ್ತ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಜಲಾಶಯಕ್ಕೆ ಹೊಂದಿಕೊಂಡಿರುವ ತಿಮ್ಮಪ್ಪಹಟ್ಟಿ, ಕಲ್ಲೇನಹಳ್ಳಿ, ನುಲೇನೂರು, ಬರಕನಹಾಳ್‌ ಸುತ್ತಮುತ್ತಲ ಗ್ರಾಮಗಳಲ್ಲೂ ನೀರಿಗೆ ಬರ ಬಂದಿದೆ. ಈಗಾಗಲೇ ಬೋರನಕಣಿವೆ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮೇವಿನ ಬೆಳೆ ಬೆಳೆಯಲು ನೀರು ಹರಿಬಿಡಲಾಗಿದೆ. ಆದರೆ ರೈತರು ತಾವು ನೆಟ್ಟಿದ್ದ ಅಡಿಕೆ ಉಳಿಸಿಕೊಳ್ಳಲು ಜಲಾಶಯದ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಹಳ್ಳದಲ್ಲಿ ಹರಿಯುತ್ತಿರುವ ನೀರನ್ನು ದಿನ್ನೆ ಅಡಿಕೆ ತೋಟಗಳಿಗೆ ಪಂಪ್‌ಸೆಟ್‌ ಮೋಟರ್‌ ಮೊರೆ ಹೋಗಿದ್ದಾರೆ.

ಕೆಲವರು ಕೆರೆಗಳಲ್ಲಿ ಅಲ್ಪಸ್ವಲ್ಪ ಉಳಿದಿರುವ ನೀರು ಹಾಗೂ ಬೇರೆ ರೈತರ ಬಳಿ ಟ್ಯಾಂಕರ್‌ ನೀರು ಖರೀದಿಸಿ ಅಡಿಕೆ ಉಳಿಸಿಕೊಳ್ಳುವ ಪ್ರಯತ್ನಿಸುತ್ತಿದ್ದಾರೆ. ಮಾರ್ಚ್‌ ಆರಂಭದಲ್ಲಿಯೇ ಇಂತಹ ಸ್ಥಿತಿ ಎದುರಾದರೇ ಏಪ್ರಿಲ್‌, ಮೇ ತಿಂಗಳಿನಲ್ಲಿ ನೀರಿನ ಅಭಾವ ಯಾವ ಸ್ಥಿತಿ ತಲುಪಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸಾವಯವ ಕೃಷಿಕ ರಾಮಕೃಷ್ಣಪ್ಪ.

ಆರ್.ಸಿದ್ದು ರಾಮನಹಳ್ಳಿ.‌
ಎನ್.ದೇವರಾಜರೆಡ್ಡಿ ಅಂತರ್ಜಲ ತಜ್ಞರು.

ತಾಲ್ಲೂಕು ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಕೊಡುವ ಪ್ರಕ್ರಿಯೆ ಆರಂಭವಾಗಿದೆ. ಬೋರನಕಣಿವೆ ಜಲಾಶಯವಿರುವ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಪ್ಪನಹಟ್ಟಿ ಗ್ರಾಮಕ್ಕೆ ಶನಿವಾರ ಟ್ಯಾಂಕರ್‌ ಮೂಲಕ ನೀರು ನೀಡಲಾಗಿದೆ. - ಸಿ.ಜಿ.ಗೀತಾ ತಹಶೀಲ್ದಾರ್‌

ಕಂದಿಕೆರೆ ಹೋಬಳಿ ಗಂಟೇನಹಳ್ಳಿ ಕೆರೆಯಿಂದ ಹಳ್ಳಕ್ಕೆ ನೀರು ಹರಿಸಲಾಗಿದೆ. ಇದರಿಂದ ತಿಮ್ಮನಹಳ್ಳಿ ರಾಮನಹಳ್ಳಿ ಸಿದ್ಧನಕಟ್ಟೆ ಭಾಗದಲ್ಲಿ ಅಂತರ್ಜಲ ಕುಸಿದು ಕೊಳವೆಬಾವಿ ಬತ್ತುವ ಭೀತಿ ಎದುರಾಗಿದೆ.- ಆರ್.ಸಿದ್ದು ರಾಮನಹಳ್ಳಿ

2 ತಿಂಗಳಲ್ಲಿ 17 ಕೊಳವೆಬಾವಿ ತಾಲ್ಲೂಕು ವ್ಯಾಪ್ತಿಯಲ್ಲಿ ಜನವರಿಯಿಂದ ಫೆಬ್ರವರಿ ಕೊನೆವರೆಗೆ ವಿವಿಧ ಗ್ರಾಮಗಳಲ್ಲಿ 17 ಕೊಳವೆಬಾವಿಗಳನ್ನು ಕುಡಿಯುವ ನೀರಿಗಾಗಿ ಕೊರೆಯಲಾಗಿದೆ. - ಅವುಗಳಲ್ಲಿ ಅರ್ಧದಷ್ಟು ಕೊಳವೆಬಾವಿಗಳಲ್ಲಿ ನೀರು ಬಂದಿದೆ

ನೀರು ಇಂಗುವಿಕೆಯಿಂದಲೇ ಅಂತರ್ಜಲ ನಿರ್ಧಾರ ಯಾವುದೇ ಜಲಾಶಯದ ಸುತ್ತ ಗಟ್ಟಿ ಶಿಲಾಪದರ ವಿಸ್ತರಿಸಿಕೊಂಡಿರುತ್ತದೆ. ಜಲಾಶಯ ಅಥವಾ ಕೆರೆಗಳ ಪಕ್ಕ ಇದ್ದರೆ ನೀರು ಸಮೃದ್ಧವಾಗಿರುತ್ತದೆ ಎನ್ನುವ ಗ್ರಹಿಕೆ ಮೊದಲಿನಿಂದಲೂ ಇದ್ದರೂ ಆಯಾಯ ಪ್ರದೇಶದಲ್ಲಿ ಬೀಳುವ ಮಳೆಯಿಂದ ನೀರು ಇಂಗುವಿಕೆಯಿಂದಲೇ ಅಲ್ಲಿನ ಅಂತರ್ಜಲ ನಿರ್ಧರಿಸಲ್ಪಟ್ಟಿರುತ್ತದೆ. ಮೊದಲು ಹೆಚ್ಚು ನೀರು ಬೇಡದ ಸಿರಿಧಾನ್ಯ ಬೆಳೆಯುತ್ತಿದ್ದ ಕಾರಣ ನೀರು ಇರುತ್ತಿತ್ತು. ಆದರೆ ಹೆಚ್ಚು ನೀರು ಬೇಡುವ ಅಡಿಕೆಯಂತಹ ಬೆಳೆಯಿಂದ ನೀರು ಬೇಗ ಬಸಿದು ಬರ ಆವರಿಸುತ್ತದೆ. ಎನ್.ದೇವರಾಜರೆಡ್ಡಿ ಅಂತರ್ಜಲ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.