ADVERTISEMENT

ಕಲುಷಿತ ನೀರು ಸೇವನೆ: ಸಾವಿನ ಸಂಖ್ಯೆ ಆರಕ್ಕೆ ಏರಿಕೆ

ಗ್ರಾಮದಲ್ಲೇ ಮೂವರು ಸಾವನ್ನಪ್ಪಿದ ಸುದ್ದಿ ರಹಸ್ಯವಾಗಿಟ್ಟಿದ್ದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:16 IST
Last Updated 13 ಜೂನ್ 2024, 14:16 IST

ತುಮಕೂರು: ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ, ಬೇಧಿಯಿಂದ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ವಾಂತಿ, ಬೇಧಿಯಿಂದ ಅಸ್ವಸ್ಥರಾಗಿದ್ದ ಮೂವರು ಬುಧವಾರ ಒಂದೇ ದಿನ ಸಾವನ್ನಪ್ಪಿದ್ದರು. ಆದರೆ, ಅದಕ್ಕೂ ಮೊದಲೇ ವಾಂತಿ, ಬೇಧಿಯಿಂದ ಗ್ರಾಮದಲ್ಲಿಯೇ ಮೂವರು ವೃದ್ಧರು ಮೃತಪಟ್ಟಿರುವ ವಿಷಯ ಗುರುವಾರ ಸಚಿವ ಜಿ.ಪರಮೇಶ್ವರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. 

ಚಿಕ್ಕದಾಸಪ್ಪ(76) ಮತ್ತು ಪೆದ್ದಣ್ಣ (74) ಹಾಗೂ ಮೀನಾಕ್ಷಿ ಎಂಬ ಮೂರು ವರ್ಷದ ಮಗು ಬುಧವಾರ ಮೃತಪಟ್ಟಿದ್ದರು. ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರ ಆರೋಗ್ಯ ವಿಚಾರಿಸಲು ಪರಮೇಶ್ವರ ಅವರು ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು. ಆಗ ಅಲ್ಲಿದ್ದ ಗ್ರಾಮಸ್ಥರು, ಕಲುಷಿತ ನೀರಿನಿಂದ ಇನ್ನೂ ಮೂವರು ಗ್ರಾಮದಲ್ಲಿಯೇ ಮೃತಪಟ್ಟಿದ್ದಾರೆ ಮಾಹಿತಿಯನ್ನು ಸಚಿವರ ಗಮನಕ್ಕೆ ತಂದರು. 

ADVERTISEMENT

ಜೂನ್‌ 10ರಂದು ಹನುಮಕ್ಕ (85), ಜೂನ್‌ 11ರಂದು ನಾಗಪ್ಪ (85) ಹಾಗೂ ನಿಂಗಮ್ಮ (90) ಎಂಬುವರು ಮೃತಪಟ್ಟಿದ್ದಾರೆ. ಆದರೆ, ಈ ಮೂವರ ಸಾವಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಬೇರೆ ಕಾರಣ ಹೇಳುತ್ತಿದ್ದಾರೆ.

‘ಇಬ್ಬರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರು ಸಾವನ್ನಪ್ಪಿದ್ದಾರೆ’ ಎಂಬುವುದು ಅಧಿಕಾರಿಗಳ ವಾದ. ಆದರೆ ‘ಮೂರು ಜನ ಸಾವಿಗೂ ಮುನ್ನ ವಾಂತಿ, ಬೇಧಿಯಿಂದ ಬಳಲುತ್ತಿದ್ದರು’ ಎಂದು ಗ್ರಾಮಸ್ಥರು ಮತ್ತು ಕುಟುಂಬದವರು ಹೇಳುತ್ತಿದ್ದಾರೆ.

‘ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ. ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ ಜನರಿಗೆ ಶುದ್ಧ ನೀರು ಪೂರೈಸುವಲ್ಲಿ ವಿಫಲವಾಗಿದೆ. ಹಲವು ದಿನಗಳಿಂದ ಓವರ್‌ ಹೆಡ್‌ ಟ್ಯಾಂಕ್‌ ಸ್ವಚ್ಛಗೊಳಿಸಿಲ್ಲ. ಕುಡಿಯುವ ನೀರು ಪೂರೈಕೆಯಾಗುವ ನಲ್ಲಿಗಳಲ್ಲಿ ಕಲುಷಿತ ನೀರು ಸರಬರಾಜು ಆಗಿದೆ. ಇದೇ ನೀರು ಕುಡಿದವರು ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಚಿನ್ನೇನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.