ತುರುವೇಕೆರೆ: ತಾಲ್ಲೂಕಿನ ಗಡಿಭಾಗದ ಮೊದ್ಲಾಪುರ ಮಜರೆ ಲಕ್ಷ್ಮಿನಗರಕ್ಕೆ ಶಾಶ್ವತ ಕುಡಿಯುವ ನೀರು ಕಲ್ಪಿಸುವುದು ಮತ್ತು ನಿರಂತರ ಜ್ಯೋತಿ ವಿದ್ಯುತ್ ಸೇರಿದಂತೆ ಹಲವು ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತ ಗ್ರಾಮವಾಗಿದೆ.
ಮೊದ್ಲಾಪುರ ಮಜರೆ ಲಕ್ಷ್ಮಿನಗರ ಗ್ರಾಮ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಇಲ್ಲಿ 15 ಕುಟುಂಬಗಳಿದ್ದು ಸುಮಾರು 60ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆಯದ್ದೇ ಸಿಂಹಪಾಲಿದೆ.
ಗ್ರಾಮಕ್ಕೆ ಸರ್ಕಾರದಿಂದ ಮಂಜೂರಾದ ಕೊಳವೆ ಬಾವಿ, ಹ್ಯಾಂಡ್ ಜಗ್, ಸಿಸ್ಟನ್ ಮತ್ತು ಮನೆ ಮನೆ ‘ನಲ್ಲಿ’ ನೀರಿನ ಸೌಕರ್ಯ ಇಲ್ಲ. ಮನೆ ಮಂದಿಯೆಲ್ಲಾ ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಟ ನಡೆಸುತ್ತಾರೆ. ಗ್ರಾಮದ ಸಮೀಪದ ಹೊಲ, ತೆಂಗಿನ ತೋಟ, ಅಡಿಕೆ ತೋಟ, ಬಾಳೆ ತೋಟ ಸಾಲುಗಳಲ್ಲಿ ಯಾರು ನೀರು ಬಿಟ್ಟಿದ್ದಾರೆ ಎಂದು ಹುಡುಕುವಂತಾಗಿದೆ.
ಎರಡು ಕಿ.ಮೀ ದೂರದಿಂದ ಹೆಗಲ ಮೇಲೆ ಹಡ್ಡೆಹೊತ್ತೊ ಅಥವಾ ತಲೆ ಮೇಲೆ ಸಿಂಬೆಮಾಡಿಕೊಂಡು ನೀರಿನ ಬಿಂದಿಗೆ ಹೊತ್ತು ಸಾಗುವವರಿದ್ದಾರೆ. ನೀರು ಎಲ್ಲಿ ಸಿಗುತ್ತದೆ ಅಲ್ಲಿ ಹಿಡಿದು ತರುವುದೇ ಒಂದು ದಿನದ ಕೆಲಸವಾಗುತ್ತಿದೆ. ಕೆಲವರು ಮೂರುವರೆ ಕಿ.ಮೀ ದೂರದ ದೇವರಹಟ್ಟಿಗೆ ಹೋಗಿ ಸಿಸ್ಟನ್‌ನಿಂದ ನೀರು ತರುತ್ತಾರೆ.
ಈ ವರ್ಷ ಮಳೆ ಕಡಿಮೆ ಬಿದ್ದಿರುವುದರಿಂದ ಕೊಳವೆ ಬಾವಿಗಳಲ್ಲೂ ಸರಿಯಾಗಿ ನೀರು ಸಿಗುತ್ತಿಲ್ಲ. ಗಂಡಸರು ಕೆಲಸಕ್ಕೆ ಹೋದಾಗ ನೀರು ತರುವ ಕೆಲಸ ಹೆಂಗಸರು, ಮಕ್ಕಳ ಹೆಗಲಿಗೆ ಬೀಳುತ್ತದೆ ಎನ್ನುತ್ತಾರೆ ನಾಗರತ್ನ.
‘ಗ್ರಾಮದಲ್ಲಿನ ಬಾಣಂತಿಯರು, ವೃದ್ಧರು, ರೋಗಿಗಳು, ಗರ್ಭಿಣಿಯರು ಮತ್ತು ಮಕ್ಕಳ ಬಟ್ಟೆ ತೊಳೆಯಲು, ಸ್ನಾನಕ್ಕೆ ಮತ್ತು ಶೌಚಾಲಯಕ್ಕೆ ಬಳಸುವ ನೀರಿಗೂ ಹಾಹಾಕಾರ. ಇನ್ನೂ ಹಬ್ಬ ಬಂದಾಗ ನೀರಿನ ಪರದಾಟ ಹೇಳತೀರದು. ಕೆಲವರು ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಾರೆ. ಒಪ್ಪೊತ್ತಿನ ಊಟಕ್ಕೂ ಕಷ್ಟಪಟ್ಟು ಬದುಕುವವರ ಸ್ಥಿತಿ ಹೇಳಲಾಗದು’ ಎನ್ನುತ್ತಾರೆ ಜಯಲಕ್ಷ್ಮಮ್ಮ.
‘ಕುರಿ, ಹಸು, ಎಮ್ಮೆ, ಮೇಕೆ ಸೇರಿ ಸುಮಾರು 30 ಜಾನುವಾರುಗಳಿವೆ. ಇವುಗಳಿಗೆ ಗ್ರಾಮದ ಸನಿಹದಲ್ಲಿನ ಕಟ್ಟೆಯಲ್ಲಿ ನೀರು ಕುಡಿಸಬೇಕು. ಇನ್ನೊಂದು ವಾರದೊಳಗೆ ಆ ನೀರು ಬತ್ತಿಹೋಗಲಿದೆ. ಸಾಕಿದ ಪ್ರಾಣಿಗಳು ನೀರು, ಮೇವಿನಿಂದ ನರಳುವುದನ್ನು ನೋಡಲಾಗದೆ ಮಾರಬೇಕಿದೆ’ ಎನ್ನುತ್ತಾರೆ ರಾಜಶೇಖರಯ್ಯ.
ಕಚ್ಚಾ ರಸ್ತೆ: ಗ್ರಾಮದೊಳಗಿನ ಮಣ್ಣಿನ ರಸ್ತೆಯಿಂದ ಮಳೆ ಬಂತೆಂದರೆ ಸಾಕು ರಸ್ತೆಯೆಲ್ಲ ಕೆಸರಿನ ಗದ್ದೆಯಾಗುತ್ತದೆ. ಜನರು ಓಡಾಡಲು ಮತ್ತು ವಾಹನ ಸಂಚಾರಕ್ಕೆ ದುಸ್ತರವಾಗಿದೆ.
ನಿರಂತರ ಜ್ಯೋತಿ ವಿದ್ಯುತ್ ಬೇಕು: ಗ್ರಾಮಕ್ಕೆ 2007ರಲ್ಲೇ ಕರೆಂಟ್ ಬಂತು. ಎಲ್ಲ ಕಡೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕೊಟ್ಟಿದ್ದಾರೆ. ಮಜರೆ ಲಕ್ಷ್ಮಿನಗರ ಗ್ರಾಮಕ್ಕೆ ನಿರಂತರ ಜ್ಯೋತಿ ವಿದ್ಯುತ್ ಇಲ್ಲ. ಮಳೆಗಾಲದಲ್ಲಿ ಇಡೀ ಗ್ರಾಮವೇ ವಿದ್ಯುತ್ ಇಲ್ಲದೆ ಕತ್ತಲೆಯಿಂದ ಆವರಿಸಿರುತ್ತದೆ.
ಬಸ್ ಇಲ್ಲ: ಈ ಗ್ರಾಮಕ್ಕೆ ಬಸ್ ಸೌಕರ್ಯವೇ ಇಲ್ಲ. ತಮ್ಮ ಮಕ್ಕಳ ಓದಿಗೆ ತೊಂದರೆಯಾಗಬಹುದೆಂದು ಮನಗಂಡು ಕೆಲವು ಪೋಷಕರು ತುರುವೇಕೆರೆ, ತಿಪಟೂರಿನ ಹಾಸ್ಟೆಲ್ ಮತ್ತು ವಸತಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಸರ್ಕಾರಿ ಕಚೇರಿ ಮತ್ತು ಪಟ್ಟಣಕ್ಕೆ ಹೋಗಲು ಅರಳಗುಪ್ಪೆ ಅಥವಾ ಬಾಣಸಂದ್ರಕ್ಕೆ ಬರಬೇಕು.
ಆಸ್ಪತ್ರೆ ದೂರ: ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ತೊಂದರೆಯಾದರೆ ಆಸ್ಪತ್ರೆಗೆ ಹೋಗಲು ಬಸ್ ಹಾಗೂ ಇನ್ನಿತರೆ ವಾಹನಗಳ ಸೌಲಭ್ಯವಿಲ್ಲ. ಹಣ ಇರುವವರು ಆಟೊ, ಬೈಕ್‌ಗಳಲ್ಲಿ ತುರುವೇಕೆರೆ, ತಿಪಟೂರಿಗೆ ಹೋಗುತ್ತಾರೆ. ಬಡವರು ನಡೆದುಕೊಂಡು ದೂರದ ಅರಳಗುಪ್ಪೆಯ ಸಾರ್ವಜನಿಕ ಆಸ್ಪತ್ರೆಗೆ ಹೋಗಬೇಕಿದೆ.
ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಜನಪ್ರತಿನಿಧಿ ತಹಶೀಲ್ದಾರ್ ಮುಖ್ಯಮಂತ್ರಿ ರಾಷ್ಟ್ರಪತಿ ಪ್ರಧಾನಿಗೆ ಪತ್ರ ಬರೆದದೂ ಪ್ರಯೋಜನವಾಗಿಲ್ಲ. ನೀರಿಲ್ಲದೆ ಗ್ರಾಮಸ್ಥರು ಗುಳೆಹೋಗುವ ಅನಿವಾರ್ಯತೆ ಎದುರಾಗಿದೆ-ಲೋಕೇಶ್, ಗ್ರಾಮಸ್ಥ
ಇಲ್ಲಿ ಶಾಲೆಗಳಿಗೆ ಹೋಗುವ ಮಕ್ಕಳಿದ್ದಾರೆ. ನಿರಂತರ ಜ್ಯೋತಿ ವಿದ್ಯುತ್ ಇಲ್ಲದೆ ಮಕ್ಕಳ ಓದಿಗೆ ತೊಂದರೆಯಾಗುತ್ತಿದೆ. ಪರೀಕ್ಷೆ ಬಂದರಂತೂ ಇಲ್ಲಿನ ಮಕ್ಕಳಿಗೆ ಓದಲು ಬರೆಯಲು ಸೀಮೆ ಎಣ್ಣೆಯ ಬುಟ್ಟಿಯೇ ಆಧಾರ-ಕೋಮಲ, ಗ್ರಾಮ ಪಂಚಾಯಿತಿ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.