ತುಮಕೂರು: ಕೊರೊನಾಕ್ಕೆ ಹೆದರಿ ಬ್ಯಾಂಕ್‍ಗಳಿಗೆ ಬರುವ ಜನರ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ. ಹಾಗಾಗಿ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ– ಆಪರೇಟಿವ್ ಬ್ಯಾಂಕ್ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಆರಂಭಿಸಿದೆ.
ನಗರದ ಜೆ.ಸಿ.ರಸ್ತೆಯಲ್ಲಿರುವ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಈ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರವನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವರು, ‘ಟಿಎಂಸಿಸಿ ಬ್ಯಾಂಕ್ ಹಲವು ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ಕೊರೊನಾ ಸಂಕಷ್ಟದ ಕಾಲದಲ್ಲೂ ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರ ಆರಂಭಿಸುವ ಮೂಲಕ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಜಯಕುಮಾರ್, ‘ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಬ್ಯಾಂಕ್‍ಗಳಿಗೆ ಗ್ರಾಹಕರು ಬರಲು ಯೋಚಿಸುತ್ತಿದ್ದಾರೆ. ಹಾಗಾಗಿ ನಾವು ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಯಾವುದೇ ಆತಂಕ ಇಲ್ಲದೆ ಗ್ರಾಹಕರು ಎಟಿಎಂಗೆ ಬಂದು ಹಣ ಡ್ರಾ ಮಾಡಿಕೊಂಡು ಹೋಗುವಂತಹ ಸ್ಥಿತಿ ರೂಪಿಸಿದ್ದೇವೆ’ ಎಂದರು.
ತುಮಕೂರಿನಲ್ಲಿ ಮೊದಲ ಬಾರಿಗೆ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರ ಆರಂಭಿಸಲಾಗಿದೆ ಎಂದು ಹೇಳಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಬ್ಯಾಂಕ್ ಉಪಾಧ್ಯಕ್ಷ ಶ್ರೀಕರ, ಸಿಇಒ ರಮೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.