ADVERTISEMENT

ದಂಡದ ಬಿಸಿ: ಡಿ.ಎಲ್‌.ಪಡೆಯಲು ದೌಡು

ಸಂಚಾರಿ ನಿಯಮಗಳ ಉಲ್ಲಂಘನೆಯ ಭಾರಿ ದಂಡಕ್ಕೆ ಎಚ್ಚೆತ್ತುಕೊಳ್ಳುತ್ತಿರುವ ಸವಾರರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 10:04 IST
Last Updated 19 ಸೆಪ್ಟೆಂಬರ್ 2019, 10:04 IST
ಚಾಲನೆಯ ಕಲಿಕಾ ಪರವಾನಗಿ(ಎಲ್‌.ಎಲ್‌.) ಕಿರುಪರೀಕ್ಷೆ ಬರೆಯಲು ಬಂದಿದ್ದ ಜನರು
ಚಾಲನೆಯ ಕಲಿಕಾ ಪರವಾನಗಿ(ಎಲ್‌.ಎಲ್‌.) ಕಿರುಪರೀಕ್ಷೆ ಬರೆಯಲು ಬಂದಿದ್ದ ಜನರು   

ತುಮಕೂರು: ಮೋಟಾರು ವಾಹನ(ತಿದ್ದುಪಡಿ) ಕಾಯ್ದೆಯಿಂದ ಸಂಚಾರಿ ನಿಯಮಗಳ ಉಲ್ಲಂಘನೆಗೆ ಭಾರಿ ಮೊತ್ತದ ದಂಡಗಳ ಬಿಸಿ ತಾಗುತ್ತಿದ್ದಂತೆ ವಾಹನ ಚಾಲನಾ ಕಲಿಕೆ ಪರವಾನಗಿಗೆ(ಎಲ್‌.ಎಲ್‌.) ಬೇಡಿಕೆಏಕಾಏಕಿ ದುಪ್ಪಟ್ಟಾಗಿದೆ.

ಈ ಮೊದಲು ಚಾಲನ ಪರವಾನಗಿ ಇಲ್ಲದೆ ವಾಹನ ಓಡಿಸಿದರೆ ₹ 500 ದಂಡ ಇತ್ತು. ಈಗ ಈ ದಂಡಶುಲ್ಕವನ್ನು ₹ 5,000ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ಎಲ್‌.ಎಲ್‌. ಪಡೆಯಲು ಜನರು ಪ್ರಾದೇಶಿಕ ಸಾರಿಗೆ ಕಚೇರಿಗೆ ದೌಡಾಯಿಸುತ್ತಿದ್ದಾರೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದರು ಎಲ್‌.ಎಲ್‌.ಗಾಗಿ ಕಿರುಪರೀಕ್ಷೆ ಎದುರಿಸಲು ವಾರಗಟ್ಟಲೇ ಕಾಯಬೇಕಾದ ಸ್ಥಿತಿ ಜನರಿಗೆ ಬಂದಿದೆ.

ADVERTISEMENT

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸೆಪ್ಟೆಂಬರ್‌ 1ರ ಮೊದಲು ಎಲ್‌.ಎಲ್‌.ಗಾಗಿ ಪ್ರತಿದಿನ ಸರಾಸರಿ 70 ಜನರು ಆನ್‌ಲೈನ್‌ನ ಕಿರುಪರೀಕ್ಷೆ ಎದುರಿಸುತ್ತಿದ್ದರು. ಈಗ 120 ಜನರು ಒಂದು ದಿನದಲ್ಲಿ ಪರೀಕ್ಷೆ ಎದುರಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. 120ಕ್ಕಿಂತಲೂ ಹೆಚ್ಚಿನ ಅರ್ಜಿಗಳು ಪ್ರತಿದಿನ ಸಲ್ಲಿಕೆ ಆಗುತ್ತಿವೆ ಎಂದು ತುಮಕೂರಿನ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ದಂಡ ಶುಲ್ಕ ಹೆಚ್ಚಳದಿಂದಾಗಿ ವಾಹನ ಚಾಲನೆ ವೇಳೆ ಇರಲೇಬೇಕಾದ ಪ್ರಮಾಣ ಪತ್ರಗಳ ಕುರಿತು ಜನರಲ್ಲಿ ಅರಿವು ಮೂಡಿದೆ. ಹಾಗಾಗಿ ಸೂಕ್ತ ದಾಖಲೆಗಳನ್ನು ಪಡೆಯಲು, ವಾಯುಮಾಲಿನ್ಯ ತಡೆ ಪ್ರಮಾಣಪತ್ರ(ಎಮಿಷನ್‌ ಟೆಸ್ಟ್‌) ಪಡೆಯಲು ಜನರು ಮುಗಿ ಬಿದ್ದಿದ್ದಾರೆ ಎಂದು ಅವರು ಹೇಳಿದರು.

ಎಮಿಷನ್‌ ಟೆಸ್ಟ್‌ನಲ್ಲಿ ಸುಲಿಗೆ: ವಾಯುಮಾಲಿನ್ಯ ತಡೆ ಪ್ರಮಾಣ ಪತ್ರ ಪಡೆಯಲು ವಾಹನಗಳ ಮಾಲೀಕರಿಂದ ಬೇಡಿಕೆ ಹೆಚ್ಚಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಪ್ರಮಾಣಪತ್ರ ವಿತರಣೆಯ ಕೆಲವು ಕೇಂದ್ರಗಳು ಶುಲ್ಕವನ್ನು ಹೆಚ್ಚಿಸಿವೆ. ನಿಯಮ ಅನುಸಾರ ದ್ವಿಚಕ್ರ ವಾಹನದ ಮಾಲಿನ್ಯ ಪರೀಕ್ಷೆಗೆ ₹ 50 ಮತ್ತು ಕಾರ್‌ಗಳ ಮಾಲಿನ್ಯ ಪರೀಕ್ಷೆಗೆ ₹ 90 ಶುಲ್ಕ ಪಡೆಯಬೇಕು. ಆದರೆ ಕೆಲವು ಕೇಂದ್ರಗಳ ಸಿಬ್ಬಂದಿ ಕಾರ್‌ಗಳ ಹೊಗೆ ಪರೀಕ್ಷೆಗೆ ₹ 140 ಪಡೆಯುತ್ತಿದ್ದಾರೆ.

ಪೊಲೀಸರು ಪರಿಶೀಲಿಸಿದಾಗ ದೊಡ್ಡ ಮೊತ್ತದ ದಂಡ ಕಟ್ಟಬೇಕಾಗುತ್ತದೆ ಎಂಬ ಭಯಕ್ಕೆ ಹಾಗೂ ಪರವಾನಗಿ ಇದ್ದರೆ ವಿಮೆ ಪರಿಹಾರ ಪಡೆಯಬಹುದು ಎಂಬ ಕಾರಣಕ್ಕೆ ಡಿ.ಎಲ್‌. ಮಾಡಿಸುತ್ತಿದ್ದೇನೆ.

ಜಿ.ಎಸ್‌.ಗೋವಿಂದರಾಜು, ಗೌಡನಹಳ್ಳಿ, ತುಮಕೂರು ತಾಲ್ಲೂಕು

*

ಚಾಲನೆ ವೇಳೆ ಎಲ್ಲ ಪ್ರಮಾಣಪತ್ರಗಳನ್ನು ಹೊಂದಿದ್ದರೆ ನಮಗೂ ಸುರಕ್ಷತೆ ಇರುತ್ತದೆ. ಸರ್ಕಾರ ದಂಡವನ್ನು ಈ ಪಾಟಿ ಹೆಚ್ಚಿಸಿದ್ದು ಸರಿಯಲ್ಲ.

ಕೆ.ಎಸ್‌.ಪೂರ್ಣಿಮಾ, ಮೇಳೆಹಳ್ಳಿ, ತುಮಕೂರು ತಾಲ್ಲೂಕು

*

ಹೊಸ ಕಾಯ್ದೆ ಅನ್ವಯ ಜನಸಾರಿಗೆ ಮತ್ತು ಸರಕು ಸಾಗಣೆ ವಾಹನದ ಡಿ.ಎಲ್‌. ಹೊಂದಲು 8ನೇ ತರಗತಿ ವಿದ್ಯಾರ್ಹತೆ ಇರಲೇಬೇಕು ಎಂಬ ನಿಯಮ ತೆಗೆಯಲಾಗಿದೆ. ಹಾಗಾಗಿ ಅನಕ್ಷರಸ್ತರು ಸಹ ಎಲ್‌.ಎಲ್‌.ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.

ಎಸ್‌.ರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ, ತುಮಕೂರು ಆರ್‌ಟಿಒ

*

ಅಂಕಿ–ಅಂಶ

2,958

ತುಮಕೂರು ಆರ್‌.ಟಿ.ಒ. ಸೆ.1ರಿಂದ 16ರ ವರೆಗೆ ವಿತರಿಸಿದ ಎಲ್‌.ಎಲ್‌.ಗಳು

120

ಎಲ್‌.ಎಲ್‌.ಗಾಗಿ ಆರ್‌.ಟಿ.ಒ.ನಲ್ಲಿ ಪ್ರತಿದಿನ ಕಿರುಪರೀಕ್ಷೆ ಎದುರಿಸುವ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.