ತುರುವೇಕೆರೆ: ಮಕ್ಕಳ ದಾಖಲಾತಿ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ತಾಲ್ಲೂಕಿನ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಮುಚ್ಚಿದ ಶಾಲೆಗಳ ಕಟ್ಟಡ ಮತ್ತು ಅದರ ಆಸ್ತಿ ರಕ್ಷಣೆ ಸವಾಲಾಗಿ ಪರಿಣಮಿಸಿದೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕಿನಲ್ಲಿ 83 ಹಿರಿಯ ಪ್ರಾಥಮಿಕ, 176 ಕಿರಿಯ ಪ್ರಾಥಮಿಕ ಸೇರಿದಂತೆ ಒಟ್ಟು 250 ಶಾಲೆಗಳಿವೆ.
ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳು ಮುಚ್ಚಲು ಹಾಜರಾತಿ ಕೊರತೆ ಪ್ರಮುಖ ಕಾರಣವಾದರೂ ಕೆಲವೆಡೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಶಾಲೆಗಳಿಗೆ ಬಾಗಿಲು ಹಾಕಲಾಗಿದೆ. ಮುಚ್ಚಿದ ಶಾಲೆಗಳ ಕೊಠಡಿ, ಶಾಲಾ ಪರಿಕರ ಮತ್ತು ಅದರ ಆಸ್ತಿ, ಪಾಸ್ತಿಗಳಿಗೆ ಸೂಕ್ತ ರಕ್ಷಣೆ, ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಲ್ಲೂಕಿನಲ್ಲಿ ಮುಚ್ಚುತ್ತಿರುವ ಶಾಲೆಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆ ಸಂಖ್ಯೆಯೇ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಎಲ್‌ಕೆಜಿಯಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗುತ್ತಿದೆ.
ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿಷಯ ಶಿಕ್ಷಕರು ಇಲ್ಲದಿರುವುದು, ಮಕ್ಕಳು ಶಾಲೆಗೆ ಹೋಗಿ ಬರಲು ಸಂಚಾರದ ತೊಡಕು, ಶಾಲೆಗಳಲ್ಲಿ ಸೌಲಭ್ಯದ ಕೊರತೆ, ಬೋಧನಾ ಗುಣಮಟ್ಟದಲ್ಲಿನ ಕುಸಿತದ ಕಾರಣವೊಡ್ಡಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
2023-24ನೇ ಸಾಲಿನಲ್ಲಿ ತಾಲ್ಲೂಕಿನ ಅಮ್ಮಸಂದ್ರದ ಆದಿತ್ಯಪಟ್ಟಣ, ಆನೆಕೆರೆ ಕ್ಲಸ್ಟರ್ನ ಸೋಮೇನಹಳ್ಳಿ ಮತ್ತು ಸೋಮೇನಹಳ್ಳಿ ಪಾಳ್ಯಾ, ಭೈತರ ಹೊಸಹಳ್ಳಿ ಕ್ಲಸ್ಟರ್‌ನ ವರಾಯಸಂದ್ರ, ಕಣತೂರು ಕ್ಲಸ್ಟರ್‌ನ ಚಂದ್ರಾಪುರ, ಲೋಕಮ್ಮನಹಳ್ಳಿ ಕ್ಲಸ್ಟರ್‌ನ ಗಂಗನಹಳ್ಳಿ, ಮಾವಿನಕೆರೆ ಕ್ಲಸ್ಟರ್‌ನ ಬ್ಯಾಡರಹಳ್ಳಿ, ಮುನಿಯೂರು ಕ್ಲಸ್ಟರ್‌ನ ಮಾದಾಪಟ್ಟಣ, ಸಂಪಿಗೆ ಹೊಸಹಳ್ಳಿ ಕ್ಲಸ್ಟರ್‌ನ ಹಳೇ ಸಂಪಿಗೆ, ತುರುವೇಕೆರೆ ಪಟ್ಟಣದ ಡಿ.ಕಲ್ಕೆರೆ ಉರ್ದು ಪ್ರಾಥಮಿಕ ಶಾಲೆಗಳು ಮುಚ್ಚಿವೆ.
ಮುಚ್ಚಿರುವ ಬಹುಪಾಲು ಶಾಲಾ ಆವರಣದೊಳಗೆ ಕಸ, ಕಡ್ಡಿ ಬಿದ್ದು ತಿಪ್ಪೆಗುಂಡಿಗಳಾಗಿವೆ. ಚಾವಣಿ ಮೇಲೆ ಮಳೆನೀರು ನಿಂತು ಶಿಥಿಲಗೊಂಡಿವೆ. ಕಾಂಪೌಂಡ್ ಇಲ್ಲದ ಶಾಲೆಗಳಲ್ಲಿ ಖಾಸಗಿಯವರ ಹಸ್ತಕ್ಷೇಪವೂ ನಡೆಯುತ್ತಿದೆ. ಹಾಳಾಗುತ್ತಿರುವ ಸರ್ಕಾರಿ ಶಾಲೆ ಕಟ್ಟಡಗಳನ್ನು ಸೂಕ್ತ ರೀತಿಯಲ್ಲಿ ನರ್ವಹಿಸಬೇಕು ಎನ್ನುತ್ತಾರೆ ಸ್ಥಳೀಯರು.
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.