ತುಮಕೂರು: ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಮನುಷ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಸಹಬಾಳ್ವೆಯೇ ಪರಿಹಾರ ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜೀ ಹೇಳಿದರು.
ನಗರದಲ್ಲಿ ಸರಸ್ ಫೌಂಡೇಷನ್ ಹಮ್ಮಿಕೊಂಡಿದ್ದ ‘ಡಿವಿಜಿ ನೆನಪು’ ಉಪನ್ಯಾಸ ಮಾಲಿಕೆಯ 77ನೇ ತಿಂಗಳ ಕಾರ್ಯಕ್ರಮದಲ್ಲಿ ‘ಮಂಕುತಿಮ್ಮನ ಕಗ್ಗ’ದ 432ನೇ ಮುಕ್ತಕ ‘ಒಟ್ಟು ಬಾಳ್ವುದ ಕಲಿಯೋ- ಮಂಕುತಿಮ್ಮ’ ಕುರಿತು ಮಾತನಾಡಿದರು.
ಅತಿಯಾದ ಸ್ವಾರ್ಥ ಮತ್ತು ತಾನೊಬ್ಬನೇ ಸರಿ, ಎಲ್ಲವೂ ತನಗೊಬ್ಬನಿಗೆ ಸೇರಿದ್ದೆಂಬ ಸಂಕುಚಿತ ಹಾಗೂ ರೋಗಗ್ರಸ್ತ ಬುದ್ಧಿಯಿಂದ ಮನುಷ್ಯ ಇಂದು ಸಹಬಾಳ್ವೆ ನಿರ್ಲಕ್ಷಿಸಿದ್ದಾನೆ. ಇದು ಮನುಷ್ಯನ ಬಹುಮುಖ ದುಷ್ಟತನಗಳಿಗೆ ಹಾಗೂ ಸಾಮಾಜಿಕ-ಕೌಟುಂಬಿಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ವಿಷಾದಿಸಿದರು.
ನಮ್ಮ ಹಿಂದಿನ ಪೀಳಿಗೆಯಲ್ಲಿ ಸಹಬಾಳ್ವೆ ಕಾಣಬಹುದಿತ್ತು. ಕಷ್ಟ-ಸುಖಗಳಿಗೆ ಒಬ್ಬರಿಗೊಬ್ಬರು ಸ್ಪಂದಿಸುವ ಗುಣ ಕಂಡುಬರುತ್ತಿತ್ತು. ಹೀಗಾಗಿ ಅವರು ನೆಮ್ಮದಿಯಿಂದ ಇದ್ದರು. ಆದರೆ ಇಂದು ನಮ್ಮ ಈಗಿನ ಪೀಳಿಗೆಯಲ್ಲಿ ಮಿತಿಮೀರಿದ ಸೌಲಭ್ಯಗಳಿದ್ದರೂ ಸಹಬಾಳ್ವೆ ಇಲ್ಲದ ಪರಿಣಾಮ ಮನುಷ್ಯನ ಮನಸ್ಸು ರೋಗಗ್ರಸ್ತವಾಗುತ್ತಿದೆ ಎಂದು ಹೇಳಿದರು.
ಇಸ್ರೊ ನಿವೃತ್ತ ಹಿರಿಯ ತಂತ್ರಜ್ಞ ಅಶೋಕ್ ಕುಮಾರ್ ದಂಪತಿಯನ್ನು ಅಭಿನಂದಿಸಲಾಯಿತು. ಸರಸ್ ಫೌಂಡೇಷನ್ ಅಧ್ಯಕ್ಷ ಆರ್.ವಿಶ್ವನಾಥನ್ ಸ್ವಾಗತಿಸಿದರು. ಉದ್ಯಮಿ ಆರ್.ಬಸವರಾಜಪ್ಪ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.