ತುಮಕೂರು: ನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಇ–ಖಾತೆ ಮಾಡಿಸಲು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಗ್ರಹಿಸಿದೆ.
ಆಸ್ತಿ ನೋಂದಣಿ ಮಾಡಲು ಇ– ಖಾತೆ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಇ–ಖಾತೆ ಮಾಡಿಸಲು ಆನ್‌ಲೈನ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಗರದಲ್ಲೂ ಇಂತಹ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಂಸ್ಥೆ ಪ್ರಮುಖರು ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲೂ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಜನಸಾಮಾನ್ಯರಿಗೆ ಆಸ್ತಿ ಖರೀದಿಸಲು, ಮಾರಾಟ ಮಾಡಲು, ಬ್ಯಾಂಕ್ ಸಾಲ ಪಡೆಯಲು, ಬ್ಯಾಂಕ್ ಸಾಲ ತೀರಿಸಿ ಖುಲಾಸೆ ಮಾಡಲು ಹಾಗೂ ಇನ್ನಿತರೆ ವ್ಯವಹಾರಗಳಿಗೆ ಇ–ಖಾತೆ ಕಡ್ಡಾಯವಾಗಿದೆ. ಹಾಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಪಾಲಿಕೆ ಕಚೇರಿಯಲ್ಲೂ ಹೆಚ್ಚಿನ ನೋಂದಣಿ ಕೌಂಟರ್ ತೆರೆಯಬೇಕು ಎಂದು ಸಂಸ್ಥೆ ಅಧ್ಯಕ್ಷ ಟಿ.ಜೆ.ಗಿರೀಶ್ ಮನವಿ ಮಾಡಿದ್ದಾರೆ.
ಪ್ರತಿ ವಾರ್ಡ್‌ನಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸುವ ಮೂಲಕ ಸರಳ ರೀತಿಯಲ್ಲಿ ಇ–ಖಾತೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.