ADVERTISEMENT

ಬರಿದಾಗುತ್ತಿದೆ ಈಚನೂರು ಕೆರೆ ಒಡಲು: ಕುಡಿಯವ ನೀರಿಗೆ ಹಾಹಾಕಾರ ಎದುರಾಗುವ ಆತಂಕ

ಸುಪ್ರತೀಕ್.ಎಚ್.ಬಿ.
Published 5 ಫೆಬ್ರುವರಿ 2024, 7:09 IST
Last Updated 5 ಫೆಬ್ರುವರಿ 2024, 7:09 IST
ತಿಪಟೂರು ತಾಲ್ಲೂಕಿನ ಈಚನೂರು ಕೆರೆಯಲ್ಲಿ ಸದ್ಯ ಸಂಗ್ರಹವಾಗಿರುವ ನೀರು
ತಿಪಟೂರು ತಾಲ್ಲೂಕಿನ ಈಚನೂರು ಕೆರೆಯಲ್ಲಿ ಸದ್ಯ ಸಂಗ್ರಹವಾಗಿರುವ ನೀರು   

ತಿಪಟೂರು: ನಗರದ ಕುಡಿಯುವ ನೀರಿನ ಜೀವನಾಡಿಯಾಗಿರುವ ಈಚನೂರು ಕೆರೆಯಲ್ಲಿ ಹೇಮಾವತಿ ನೀರು ಮುಗಿಯುವ ಹಂತಕ್ಕೆ ತಲುಪಿದೆ. ನೀರಿಗೆ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ.

ನಗರದಲ್ಲಿ 31 ವಾರ್ಡ್‌ಗಳಿದ್ದು, 80 ಸಾವಿರ ಜನಸಂಖ್ಯೆ ಇದೆ. ನಗರಕ್ಕೆ ನಿತ್ಯ 8ರಿಂದ 9 ಎಂಎಲ್‍ಡಿ (ಮಿಲಿಯನ್ ಲೀಟರ್ ಪೆರ್ ಡೇ) ನೀರಿನ ಅಗತ್ಯವಿದೆ. ನಗರದ ಜನ ವರ್ಷವಿಡೀ ಈಚನೂರು ಕೆರೆಯ ಹೇಮಾವತಿ ನೀರನ್ನೇ ಆಶ್ರಯಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಸದ್ಯ ನಗರದ ಜನರಿಗೆ 8ರಿಂದ 10 ದಿನಗಳಿಗೆ ಒಮ್ಮೆ ಹೇಮಾವತಿ ನೀರು ಸರಬರಾಜು ಮಾಡುತ್ತಿದ್ದರೂ, ಅಗತ್ಯಕ್ಕೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಈ ಕೆರೆಯೂ 72 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ 6ರಿಂದ 8 ಎಂಸಿಎಫ್‌ಟಿ ನೀರು ಇದ್ದು, ಮುಂದಿನ ದಿನಗಳಲ್ಲಿ ನೀರನ್ನು ಬಳಸಲು ಸಾಧ್ಯವಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈಗಾಗಲೇ ಹಲವು ಬಡಾವಣೆಗಳಲ್ಲಿ ಸ್ವಲ್ಪ ಮಟ್ಟಿನ ನೀರಿನ ಆಭಾವ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಏನು ಎಂಬ ಆತಂಕ ಎದುರಾಗಿದೆ.

ತುಮಕೂರು ನಾಲೆಗೆ ಹೇಮಾವತಿಯಿಂದ ವರ್ಷಕ್ಕೆ 24 ಟಿಎಂಸಿ ನೀರು ನಿಗದಿಮಾಡಿದ್ದು, ಈ ಬಾರಿ ಮಳೆ ಕಡಿಮೆ ಬಿದ್ದ ಪರಿಣಾಮ 14ರಿಂದ 16 ಟಿಎಂಸಿ ಅಡಿ ನೀರನ್ನು ನಾಲೆ ಮೂಲಕ ಹರಿಸಲಾಗಿದೆ. ಇನ್ನುಳಿದ ನೀರನ್ನು ಪ್ರತಿಬಾರಿಯಂತೆ ಈ ಬಾರಿಯೂ ಬಿಡಬೇಕಿದೆ. ಆದರೆ ಈ ಬಾರಿ ಜನವರಿ ಅಂತ್ಯ, ಫೆಬ್ರವರಿ ಮೊದಲ ವಾರದಲ್ಲಿಯೇ ಈಚನೂರು ಕೆರೆಯಲ್ಲಿ ನೀರು ಖಾಲಿಯಾಗಿರುವುದು ಸದ್ಯದ ಆತಂಕಕ್ಕೆ ಕಾರಣವಾಗಿದೆ.

ಎರಡು ದಿನದ ಹಿಂದೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರಿನ ಬುಗುಡನಹಳ್ಳಿ ಕೆರೆಗೆ ಭೇಟಿ ನೀಡಿ, ನೀರಿನ ಪ್ರಮಾಣ ಗಮನಿಸಿ ನೀರಿನ ಅಭಾವದ ಬಗ್ಗೆ ಜಿಲ್ಲಾ ಉಸ್ತವಾರಿ ಸಚಿವ ಡಾ.ಜಿ.ಪರಮೇಶ್ವರ ಗಮನಕ್ಕೆ ತಂದಿದ್ದರು.

ತಿಪಟೂರು ತಾಲ್ಲೂಕಿನ ಈಚನೂರು ಕೆರೆಯಲ್ಲಿ ಸದ್ಯ ಸಂಗ್ರಹವಾಗಿರುವ ನೀರು

ನಗರದ ಅಮಾನಿಕೆರೆಯನ್ನು ಸಹ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸುತ್ತಿದ್ದು, ಈ ಕೆರೆ 32 ಎಂಸಿಎಫ್‌ಸಿ ನೀರು ಸಂಗ್ರಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಕೆರೆಗೆ ನೀರು ಸರಬರಾಜು ಮಾಡುವುದರಿಂದ ನಗರಸಭೆಯ 220 ಕೊಳವೆಬಾವಿ ಹಾಗೂ ಖಾಸಗಿಯವರ ಸಾವಿರಾರು ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಯಾಗಿದೆ. ನಗರಸಭೆಯ 220 ಕೊಳವೆ ಬಾವಿಗಳಲ್ಲಿನ ಒಟ್ಟು 1.8 ಎಂಎಲ್‌ಡಿ ನೀರನ್ನು ನಿತ್ಯ ನಗರದ ಜನರಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಕೆಲ ಕೊಳವೆಬಾವಿಗಳ ದುರಸ್ತಿ ಅಗತ್ಯವಿದ್ದು, ಶೀಘ್ರ ನಗರಸಭೆ ಸಿಬ್ಬಂದಿ, ಅಧಿಕಾರಿಗಳು ನೀರಿನ ಹಾಹಾಕಾರ ಎದುರಿಸಲು ಸನ್ನದ್ಧವಾಗಬೇಕಿದೆ.

ಕೆ.ಷಡಕ್ಷರಿ
ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಡ್ಯಾಂನಲ್ಲಿನ ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಶೀಘ್ರ ನೀರು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದ್ದೇವೆ.
ಕೆ.ಷಡಕ್ಷರಿ ಶಾಸಕ
ಸದ್ಯ ಕೊಳವೆಬಾವಿಯಲ್ಲಿನ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ನಗರದ ಜನತೆಗೆ ನೀಡಲಾಗುತ್ತಿದೆ. ಅನಗತ್ಯವಾಗಿ ನೀರು ಪೋಲು ಮಾಡದೆ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಬೇಕು.
ವಿಶ್ವೇಶ್ವರ ಬದರಗಡೆ ಪೌರಾಯುಕ್ತ
ಗಿರೀಶ್
ಈ ಬಾರಿ ಮಳೆ ಪ್ರಮಾಣ ಕಡಿಮೆ ಆಗಿದ್ದು ನೀರಿನ ಅಗತ್ಯತೆ ಹೆಚ್ಚಾಗಿದೆ. ಕೂಡಲೇ ಡ್ಯಾಂ ನೀರನ್ನು ಅಗತ್ಯಕ್ಕೆ ತಕ್ಕಷ್ಟು ಬಿಡುಗಡೆ ಮಾಡಿದರೆ ಮಾತ್ರವೇ ನೀರಿನ ಹಾಹಾಕಾರ ನೀಗಿಸಲು ಸಾಧ್ಯ.
ಗಿರೀಶ್ ಈಚನೂರು ಗ್ರಾ.ಪಂ.ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.