ADVERTISEMENT

‘ಇ.ಡಿ ದಾಳಿ ವಿಳಂಬವಾಯಿತು’

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:09 IST
Last Updated 11 ಜುಲೈ 2024, 6:09 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ತುಮಕೂರು: ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಇತರರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ಮಾಡಿರುವುದರಲ್ಲಿ ಯಾವುದೇ ವಿಶೇಷ ಹಾಗೂ ಆಶ್ಚರ್ಯವಿಲ್ಲ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಬಲ ಕುಸಿದ ಕಾರಣ ದಾಳಿ ಸ್ವಲ್ಪ ವಿಳಂಬವಾಗಿದೆಯಷ್ಟೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸುವಂತೆ ನಾಗೇಂದ್ರ ಅವರೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ ನಾಯಕರಂತೆ ತಲೆಮರಿಸಿಕೊಂಡು ಓಡಾಡುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಇ.ಡಿ, ಸಿಬಿಐ ಬಳಸಿಕೊಂಡು ಕಾಂಗ್ರೆಸ್‌ ನಾಯಕರ ಮತ್ತು ವಿರೋಧ ಪಕ್ಷಗಳ ಬಲ ಕುಗ್ಗಿಸುವ ಕೆಲಸ ಮಾಡುತ್ತಿದೆ. ಹತ್ತು ವರ್ಷಗಳಿಂದ ಇದೇ ರೀತಿಯಾಗಿ ನಡೆದುಕೊಂಡು ಬಂದಿದೆ. ಇದರಲ್ಲಿ ಆಶ್ಚರ್ಯ ಪಡುವಂತಹದ್ದು ಏನೂ ಇಲ್ಲ ಎಂದರು.

ADVERTISEMENT

ಮುಡಾ ಹಗರಣ ಕುರಿತು ಬಿಜೆಪಿ ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು. 2011ರಲ್ಲಿ ಮುಡಾ ಅಕ್ರಮ ಕುರಿತು ಬಿ.ಎಸ್‌.ಯಡಿಯೂರಪ್ಪ, ಸ್ಪೀಕರ್‌ಗೆ ದೂರು ನೀಡಿದ್ದರು. ಆಗ ಯಾಕೆ ತನಿಖೆ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಕ್ರಮದ ತನಿಖೆ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.