ADVERTISEMENT

ಶಿರಾ: 108 ಕೊಠಡಿಗಳು ಸಂಪೂರ್ಣ ಶಿಥಿಲ

ಸರ್ಕಾರಿ ಶಾಲೆಗಳಿಂದ ವಿಮುಖರಾಗುತ್ತಿರುವ ಮಕ್ಕಳು– ಎಲ್ಲೆಡೆ ಶಿಕ್ಷಕರ ಕೊರತೆ

ಎಚ್.ಸಿ.ಅನಂತರಾಮು
Published 20 ಜೂನ್ 2024, 7:58 IST
Last Updated 20 ಜೂನ್ 2024, 7:58 IST
ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಸರ್ಕಾರಿ ಶಾಲೆ
ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಸರ್ಕಾರಿ ಶಾಲೆ   

ಶಿರಾ: ಮೂಲ ಸೌಕರ್ಯಗಳ ಕೊರತೆಯ ಕಾರಣದಿಂದ ಪೋಷಕರು ಸರ್ಕಾರಿ ಶಾಲೆಗಳಿಂದ ವಿಮುಖವಾಗುತ್ತಿದ್ದಾರೆ. ಈ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಮುಂದಾಗುತ್ತಿಲ್ಲ. ತಾಲ್ಲೂಕಿನಲ್ಲಿ ಅಲ್ಲೊಂದು, ಇಲ್ಲೊಂದು ಶಾಲೆಗಳು ಮಾತ್ರ ಮೂಲಸೌಕರ್ಯಗಳನ್ನು ಹೊಂದಿದ್ದು ಮಕ್ಕಳನ್ನು ಆಕರ್ಷಿಸುತ್ತಿವೆ.

ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳೇ ಆಧಾರವಾಗಿದ್ದವು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಾನವನ್ನು ಖಾಸಗಿ ಶಾಲೆಗಳು ಆಕ್ರಮಿಸಿಕೊಳ್ಳುತ್ತಿವೆ.

ತಾಲ್ಲೂಕಿನಲ್ಲಿ ಒಟ್ಟು 448 ಸರ್ಕಾರಿ ಶಾಲೆಗಳಿವೆ. ಒಂದೆಡೆ ಶಿಕ್ಷಕರ ಕೊರತೆಯಾದರೆ, ಮತ್ತೊಂದು ಕಡೆ 18 ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ. ತಾಲ್ಲೂಕಿನ 60 ಶಾಲೆಗಳ 108 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು ಬಳಕೆಗೆ ಬಾರದಂತಾಗಿವೆ. ಈ ಕೊಠಡಿಗಳನ್ನು ನೆಲಸಮ ಮಾಡಿ ಹೊಸ ಕೊಠಡಿ ನಿರ್ಮಿಸಬೇಕಿದೆ. ನಗರದಲ್ಲಿ 11 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 97 ಹೊಸ ಕೊಠಡಿಗಳು ನಿರ್ಮಾಣವಾಗಬೇಕಿದೆ. 300ಕ್ಕೂ ಹೆಚ್ಚು ಕೊಠಡಿಗಳು ಶಿಥಿಲಗೊಂಡಿದ್ದು, ದುರಸ್ತಿ ಮಾಡಿಕೊಂಡು ಬಳಕೆ ಮಾಡುತ್ತಿದ್ದರೂ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಕಲಿಯುವಂತಾಗಿದೆ.

ADVERTISEMENT

ತಾಲ್ಲೂಕಿನ ದ್ವಾರಾಳು ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1944ರಲ್ಲಿ ನಿರ್ಮಾಣವಾದ ಶಾಲೆ ಇಂದು ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಇಲ್ಲಿ ಮೂರು ಕೊಠಡಿಗಳಿದ್ದು, 2 ಸಂಪೂರ್ಣ ಶಿಥಿಲಗೊಂಡಿದ್ದು ನೆಲಸಮ ಮಾಡಬೇಕಿದೆ. ಆದರೆ ಇದರಲ್ಲಿಯೇ ತರಗತಿ ನಡೆಯುತ್ತಿದ್ದು, ಮಳೆ ಬಂದಾಗ ಸೋರುತ್ತಿದೆ.

ರಾಷ್ಟ್ರೀಯ ಹೆದ್ದಾರಿ- 48ಕ್ಕೆ ಹೊಂದಿಕೊಂಡಂತೆ ಶಾಲೆ ಇದೆ. ಆಟದ ಮೈದಾನ ಇಲ್ಲ. ಶಾಲಾ ಕೊಠಡಿಗೆ ಹೊಂದಿಕೊಂಡಂತೆ ಅಡುಗೆ ಕೋಣೆ ಮಾಡಿಕೊಂಡಿದ್ದಾರೆ. ಆಹಾರ ಪದಾರ್ಥಗಳನ್ನು ಇಟ್ಟುಕೊಳ್ಳಲು ಸಹ ಜಾಗ ಇಲ್ಲ. ಇಲ್ಲಿಯೇ ಮಕ್ಕಳು ಬಿಸಿಯೂಟ ಸವಿಯಬೇಕಿದೆ. ಗತ ವೈಭವವನ್ನು ಹೊಂದಿದ್ದ ಶಾಲೆ ಇಂದು ದುಸ್ಥಿತಿಯಲ್ಲಿದೆ.

ಸದ್ಯ ಶಾಲೆಯಲ್ಲಿ 10 ವಿದ್ಯಾರ್ಥಿಗಳು ಇದ್ದಾರೆ. ಶಾಲೆಗೆ ಶೌಚಾಲಯ ಸಹ ಇರಲಿಲ್ಲ. ಶಿಕ್ಷಕರು ಸೇರಿದಂತೆ ಮಕ್ಕಳಿಗೆ ಬಯಲೇ ಶೌಚಾಲಯವಾಗಿತ್ತು. ಈ ಶಾಲೆ ಚುನಾವಣೆ ಮತಗಟ್ಟೆಯಾಗಿರುವ ಕಾರಣ ಐದು ವರ್ಷದ ಹಿಂದೆ ಚುನಾವಣೆ ಸಮಯದಲ್ಲಿ ಸಿದ್ಧ ಶೌಚಾಲಯ ಇಟ್ಟಿದ್ದು, ಅದನ್ನೇ ಬಳಸಿಕೊಳ್ಳಲಾಗುತ್ತಿದೆ.

ಗ್ರಾಮದಲ್ಲಿ ಬಡವರಿಗಿಂತ ಹಣವಂತರೇ ಹೆಚ್ಚಿದ್ದು ಈ ಶಾಲೆ ಬಗ್ಗೆ ಕಾಳಜಿ ವಹಿಸದೆ ಶಿರಾದ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಶಾಲೆ ಮುಚ್ಚುವ ದಿನಗಳು ದೂರವಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಸರ್ಕಾರ ಉಚಿತ ಶಿಕ್ಷಣದ ಹೆಸರಿನಲ್ಲಿ ಪುಸ್ತಕ, ಸಮವಸ್ತ್ರ, ಬಿಸಿಯೂಟ, ಹಾಲು, ಶೂ, ಸಾಕ್ಸ್ ನೀಡುತ್ತಿದೆ. ಆದರೆ ಕಲಿಕೆಗೆ ಅಗತ್ಯವಾದ ಶಿಕ್ಷಕರನ್ನು ನೀಡುತ್ತಿಲ್ಲ. ಯಾವಾಗ ಬೇಕಿದ್ದರೂ ಬೀಳುವಂತೆ ಇರುವ ಈ ಶಾಲೆಗಳಿಗೆ ಮಕ್ಕಳನ್ನು ಯಾವ ಧೈರ್ಯದ ಮೇಲೆ ಕಳುಹಿಸಬೇಕು? ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎನ್ನುವುದು ಗ್ರಾಮಸ್ಥರ ಪ್ರಶ್ನೆ.

ಶಾಲೆಯ ಚಾವಣಿ ಹೆಂಚು ಒಡೆದಿದೆ
ತಾಲ್ಲೂಕಿನಲ್ಲಿ 108 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲವಾಗಿವೆ. ಅವುಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಶಿಥಿಲವಾಗಿರುವ ಮತ್ತು ದುರಸ್ತಿ ಮಾಡಬೇಕಿರುವ ಶಾಲೆಗಳ ಪಟ್ಟಿ ಮಾಡಿದ್ದು ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಕೆಲವು ಶಾಲೆಗಳಲ್ಲಿ ಕೊಠಡಿಗಳನ್ನು ದುರಸ್ತಿಗೊಳಿಸಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
–ಸಿ.ಎನ್.ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ
ಸರ್ಕಾರ ಕೇವಲ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಹೇಳುವ ಬದಲು ಕಲಿಕೆಗೆ ಅಗತ್ಯ ಸೌಕರ್ಯ ಒದಗಿಸಬೇಕು. ಬೀಳುವ ಹಂತದಲ್ಲಿರುವ ಕೊಠಡಿಗಳಲ್ಲಿ ಶಾಲೆ ನಡೆಸಿದರೆ ಭಯದಲ್ಲಿ ಮಕ್ಕಳು ಏನು ಕಲಿಯಲು ಸಾಧ್ಯ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಹೊಸ ಕಟ್ಟಡಗಳನ್ನು ನಿರ್ಮಿಸಿ ಶಿಕ್ಷಕರನ್ನು ನೇಮಿಸಿ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡಿದರೆ ಎಲ್ಲರೂ ಸರ್ಕಾರಿ ಶಾಲೆಗಳ ಕಡೆ ಮುಖ ಮಾಡುವರು.
–ಪ್ರದೀಪ್, ದ್ವಾರಾಳು
ಹಲವು ಕಡೆ ಮೂಲ ಸೌಕರ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಸುಧಾರಿಸಬೇಕು. ಹೊಸ ಕಟ್ಟಡಗಳ ನಿರ್ಮಾಣ ಮಾಡುವ ಮೂಲಕ ಶಿಕ್ಷಕರನ್ನು ನೇಮಕ ಮಾಡಿ ಪೋಷಕರನ್ನು ಆಕರ್ಷಿಸಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ.
–ವಿಜಯ್, ದೇವರಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.