ತುಮಕೂರು: ಲಾಕ್‌ಡೌನ್ ಹಾಗೂ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಸಲ್ಮಾನರು ಸರ್ಕಾರದ ಆದೇಶಗಳನ್ನು ಪಾಲಿಸುವ ಮೂಲಕ ಸೋಮವಾರ ಸರಳವಾಗಿ ಈದ್–ಉಲ್–ಫಿತ್ರ್ ಆಚರಿಸಿದರು.
ರಂಜಾನ್ ದಿನದಂದು ತುಂಬಿ ತುಳುಕುತ್ತಿದ್ದ ಮಸೀದಿಗಳು ಜನರಿಲ್ಲದೇ ಖಾಲಿಯಾಗಿದ್ದವು. ಮಸೀದಿಗಳಲ್ಲಿ ಕೇವಲ ಮೌಲ್ವಿಗಳು, ಮುಖಂಡರು ಮಾತ್ರವೇ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದ ಕಾರಣ ನಗರದ ಈದ್ಗಾ ಮೈದಾನ ಸೇರಿದಂತೆ ಪ್ರಮುಖ ಪ್ರಾರ್ಥನಾ ಸ್ಥಳಗಳು ಬಿಕೋ ಎನ್ನುತ್ತಿದ್ದವು.
ಬಹುತೇಕ ಮುಸಲ್ಮಾನರು ಬೆಳಿಗ್ಗೆ ಬೇಗನೇ ಎದ್ದು, ಹೊಸಬಟ್ಟೆ ಧರಿಸಿ ತಮ್ಮ ಕುಟುಂಬಸ್ಥರೊಡನೆ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು, ಮಹಿಳೆಯರು, ಹಿರಿಯರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕೇವಲ ತಮ್ಮ ಆಪ್ತರನ್ನೇ ಮನೆಗಳಿಗೆ ಆಹ್ವಾನಿಸಿ ಬಿರಿಯಾನಿ ಸೇರಿದಂತೆ ವಿವಿಧ ಖಾದ್ಯ ಸವಿದರು.
ಹಬ್ಬದ ನಿಮಿತ್ತ ಸ್ಥಿತಿವಂತರು ಬಡವರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಊಟದ ಜತೆಗೆ ಹಣ, ಬಟ್ಟೆ, ದಿನಸಿ ಸೇರಿದಂತೆ ವಿವಿಧ ವಸ್ತುಗಳನ್ನು ದಾನವಾಗಿ ನೀಡಿದರು. ಪ್ರಾರ್ಥನೆ ಸಮಯದಲ್ಲಿ ದೇಶದ ಜನರನ್ನು ಕೊರೊನಾದಿಂದ ಬಿಡುಗಡೆ ನೀಡುವಂತೆ ಹಾಗೂ ಈ ವರ್ಷ ಉತ್ತಮ ಮಳೆ, ಬೆಳೆ ನೀಡುವಂತೆ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.