ADVERTISEMENT

ಸೋಲಾರ್ ಪಾರ್ಕ್ ಗ್ರಾಮಗಳ ಅಭಿವೃದ್ಧಿಗೆ ಒತ್ತು: ಶ್ರೀನಿವಾಸಪ್ಪ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:37 IST
Last Updated 11 ಆಗಸ್ಟ್ 2021, 4:37 IST
ಪಾವಗಡ ತಾಲ್ಲೂಕಿನ ತಿರುಮಣಿ ಬಳಿಯ ಸೋಲಾರ್ ಪಾರ್ಕ್ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸೌರ ಶಕ್ತಿ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸಪ್ಪ ಅವರಿಗೆ ಮನವಿ ಸಲ್ಲಿಸಿದರು
ಪಾವಗಡ ತಾಲ್ಲೂಕಿನ ತಿರುಮಣಿ ಬಳಿಯ ಸೋಲಾರ್ ಪಾರ್ಕ್ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸೌರ ಶಕ್ತಿ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸಪ್ಪ ಅವರಿಗೆ ಮನವಿ ಸಲ್ಲಿಸಿದರು   

ಪಾವಗಡ: ಸೋಲಾರ್ ಪಾರ್ಕ್‌ಗೆ ಸಂಬಂಧಿಸಿದ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಕರ್ನಾಟಕ ಸೌರ ಶಕ್ತಿ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸಪ್ಪ ತಿಳಿಸಿದರು.

ತಾಲ್ಲೂಕಿನ ತಿರುಮಣಿ ಬಳಿಯ ಸೋಲಾರ್ ಪಾರ್ಕ್ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ರೈತರು ಸೋಲಾರ್ ಪಾರ್ಕ್‌ಗೆ ಜಮೀನು ನೀಡಿದ ರೈತರ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಿದ್ದು, ಎಲ್ಲ ಬೇಡಿಕೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿವೆ. ಗ್ರಾಮಗಳ ಅಭಿವೃದ್ಧಿಗೆ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದರು.

ADVERTISEMENT

ಸಂಘದ ಅಧ್ಯಕ್ಷ ಸದಾಶಿವಾರೆಡ್ಡಿ, ಗ್ರಾಮಗಳಲ್ಲಿ ರಸ್ತೆ, ಚರಂಡಿ, ಶಿಕ್ಷಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಆರ್.ಪಿ ಸಾಂಬ ಸದಾಶಿವರೆಡ್ಡಿ, ಸೋಲಾರ್ ಪಾರ್ಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಗೆ ಪಿಎಫ್, ಇಎಸ್‌ಐ ಸೌಲಭ್ಯ ಕಲ್ಪಿಸಬೇಕು. ತಿರುಮಣಿ ಗ್ರಾಮದಲ್ಲಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಿ ಇಂಗ್ಲಿಷ್‌ ಭಾಷಾ ಶಿಕ್ಷಣ ನೀಡಲು ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದರು.

ಪಾವಗಡದಿಂದ ವೆಂಕಟಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಮಾರಮ್ಮನ ದೇಗುಲದಿಂದ ಬಳಸಮುದ್ರ, ರಾಯಲಚೆರ್ಲು ಗ್ರಾಮದ ಮೂಲಕ ಅಚ್ಚಮ್ಮನಹಳ್ಳಿವರೆಗೆ ರಸ್ತೆ ನಿರ್ಮಿಸಬೇಕು. ಬಳಸಮುದ್ರ ಗ್ರಾಮದಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಬೇಕು. ಕ್ಯಾತಗಾನಚೆರ್ಲು ಗ್ರಾಮದಿಂದ ಬಳ್ಳಾರಿ ರಿಂಗ್ ರಸ್ತೆವರೆಗೂ ರಸ್ತೆ ಅಭಿವೃದ್ಧಿ ಮಾಡಬೇಕು. ಕ್ಯಾತಗಾನಚೆರ್ಲು ಗ್ರಾಮದಿಂದ ತಾಟಿಕುಂಟೆ ಕೆರೆ ಕಟ್ಟೆತನಕ ರಸ್ತೆ ಅಭಿವೃದ್ಧಿ ಮಾಡಬೇಕು. ತಿರುಮಣಿಯಲ್ಲಿ ಶಾಲಾಕಟ್ಟಡ ಸಂಕೀರ್ಣ ನಿರ್ಮಾಣ ಮಾಡಿ ಶಾಲೆಗೆ ಸೌಲಭ್ಯ ಕಲ್ಪಿಸಬೇಕು. ಸೋಲಾರ್ ಗ್ರಾಮಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಬೇಕು. ಸೋಲಾರ್ ಪಾರ್ಕ್ ಘಟಕಗಳ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಡಿಜಿಎಂ ಅಮರನಾಥ್, ಜಂಟಿ ಕಾರ್ಯದರ್ಶಿ ನಾಗರಾಜ್, ಶಕ್ತಿಸ್ಥಳ ರೈತ ಸಂಘದ ಕಾರ್ಯಾಧ್ಯಕ್ಷ ಅಕ್ಕಲಪ್ಪ, ಕಾರ್ಯಕಾರಿಣಿ ಸದಸ್ಯ ಗೋವಿಂದಪ್ಪ, ಪದಾಧಿಕಾರಿಗಳು, ಸೋಲಾರ್ ಡೆವೆಲಪರ್ಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.