ತುಮಕೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಶೇ 60ರಷ್ಟು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿವಿಧ ಇಲಾಖೆಗಳ 50 ವಿಭಾಗಗಳಿಂದ ಒಟ್ಟು 66 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಪೊಲೀಸ್, ಗೃಹರಕ್ಷಕ ಹಾಗೂ ಅಗ್ನಿಶಾಮಕ ದಳ ಇಲಾಖೆಯ ಒಂದು ಸ್ಥಾನಕ್ಕೆ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ನಾಮಪತ್ರದ ಜತೆಗೆ ಪೂರಕ ದಾಖಲೆಗಳನ್ನು ಸಲ್ಲಿಸದ ಕಾರಣ, ಸಲ್ಲಿಕೆಯಾಗಿದ್ದ ನಾಮಪತ್ರ ಸಹ ತಿರಸ್ಕೃತಗೊಂಡಿದೆ. ಈ ವಿಭಾಗದಿಂದ ಪ್ರತಿನಿಧಿ ಇಲ್ಲದಂತಾಗಿದೆ.
ಉಳಿದ 65 ಸ್ಥಾನಗಳ ಪೈಕಿ 39 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 26 ಸ್ಥಾನಕ್ಕಾಗಿ 62 ನೌಕರರು ಕಣದಲ್ಲಿದ್ದಾರೆ. ನ. 16ರಂದು ಮತದಾನ ನಡೆಯಲಿದ್ದು, ನಗರದಲ್ಲಿ ಒಟ್ಟು 9 ಮತಗಟ್ಟೆ ಸ್ಥಾಪಿಸಲಾಗಿದೆ.
ಆಸ್ಪತ್ರೆಗಳು ಹಾಗೂ ಇತರೆ ಅಗತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ನೌಕರರು ಮತ್ತು ಆರೋಗ್ಯ ಇಲಾಖೆ ನೌಕರರ ಮತದಾನಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಉಳಿದ ಕ್ಷೇತ್ರಗಳ ಮತದಾನಕ್ಕಾಗಿ ಗುಂಚಿ ಚೌಕದಲ್ಲಿರುವ ಪ್ರಾಥಮಿಕ ಶಾಲೆ ಮತ್ತು ಕೋಟೆ ಆಂಜನೇಯ ದೇವಸ್ಥಾನದ ಬಳಿ ಇರುವ ಪ್ರಾಥಮಿಕ ಶಾಲೆಯಲ್ಲಿ ತಲಾ 4 ಮತಗಟ್ಟೆ ಸ್ಥಾಪಿಸಲಾಗಿದೆ.
ನ. 16ರಂದು ಬೆಳಿಗ್ಗೆ 9ರಿಂದ ಸಂಜೆ 4ಗಂಟೆ ವರೆಗೆ ಮತದಾನ ನಡೆಯಲಿದ್ದು, ನಂತರ ಮತಗಳ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ವಿ.ಗೋವಿಂದರೆಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.