ತುರುವೇಕೆರೆ: ದಂಡಿನಶಿವರ ಹೋಬಳಿಯ ಅಪ್ಪಸಂದ್ರ ಗ್ರಾಮದ ಜಮೀನೊಂದರ ಸರ್ವೆ ನಂತರ ತಾವು ಬೆಳೆಸಿದ್ದ ತೆಂಗಿನಮರ ಜಮೀನು ಮಾಲೀಕರ ಪಾಲಿಗೆ ಹೋದವು ಎಂದು ಸಿಟ್ಟಿಗೆದ್ದ ಪಕ್ಕದ ಜಮೀನಿನ ಮಾಲೀಕ ರಾತ್ರೋ ರಾತ್ರಿ 42 ತೆಂಗಿನ ಮರಗಳನ್ನು ಕಡಿದು ಹಾಕಿದ್ದಾರೆ.
ಅಪ್ಪಸಂದ್ರದ ಸಿದ್ದಗಂಗಮ್ಮ ಅವರ ಜಮೀನನ್ನು ಇತ್ತೀಚಿಗೆ ಸರ್ವೆ ಮಾಡಲಾಗಿತ್ತು. ಅಳತೆ ವೇಳೆ ಪಕ್ಕದ ಜಮೀನಿನ ಮಾಲೀಕ ಕಾಳೇಗೌಡ ಎಂಬುವರು ಬೆಳೆಸಿದ್ದ 42 ತೆಂಗಿನ ಮರಗಳು ಸಿದ್ಧಗಂಗಮ್ಮ ಅವರ ವ್ಯಾಪ್ತಿಗೆ ಸೇರಿವೆ ಎಂದು ತಳಿದು ಬಂದಿತ್ತು.
ಸರ್ವೆ ನಂತರ ಜಮೀನು ಬಿಟ್ಟುಕೊಡುವಂತೆ ಸಿದ್ದಗಂಗಮ್ಮ ಕೇಳಿದ್ದರು. ಅದಕ್ಕೆ ಕಾಳೇಗೌಡ ಅವರು, ‘30 ವರ್ಷಗಳಿಂದ ಗೊತ್ತೋ ಗೊತ್ತಿಲ್ಲದೆಯೊ ಜಮೀನನ್ನು ಅನುಭವಿಸಿದ್ದೇವೆ. ಮರಗಳನ್ನೂ ಬೆಳೆಸಿದ್ದೇವೆ. ಹಾಗಾಗಿ ಇದರಷ್ಟೇ ಜಮೀನನ್ನು ಬೇರೆಡೆ ಕೊಡಿ’ ಎಂದು ಸಿದ್ದಗಂಗಮ್ಮನ ಬಳಿ ಕೇಳಿದ್ದರು. ಇದಕ್ಕೆ ಸಿದ್ಧಗಂಗಮ್ಮ ಒಪ್ಪಿರಲಿಲ್ಲ.
ಇಬ್ಬರ ನಡುವೆ ಸಂಧಾನ ನಡೆಸಿದ್ದ ಗ್ರಾಮಸ್ಥರು, ತೆಂಗಿನಮರಗಳನ್ನು ಬೆಳೆಸಿದ್ದಕ್ಕಾಗಿ ಒಂದಿಷ್ಟು ಹಣವನ್ನು ಪರಿಹಾರ ರೂಪದಲ್ಲಿ ಕಾಳೇಗೌಡ ಅವರಿಗೆ ಕೊಡಿಸಲು ಯತ್ನಿಸಿದ್ದರು.
‘30 ವರ್ಷಗಳಿಂದ ನನ್ನ ಜಮೀನನ್ನು ಅನುಭವಿಸಿದ್ದಾರೆ. ಅದರ ಫಲವನ್ನು ಸಹ ಉಂಡಿದ್ದಾರೆ. ಅಲ್ಲದೇ ನನಗೆ ಜಮೀನಿನ ಹಕ್ಕು ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಪರಿಹಾರ ಕೊಡುವುದಿಲ್ಲ’ ಎಂದು ಸಿದ್ಧಗಂಗಮ್ಮ ಪಟ್ಟು ಹಿಡಿದಿದ್ದರು.
ಈ ವೇಳೆ ಮಾತಿನ ಚಕಮಕಿ ನಡೆದಿತ್ತು. ‘ನೀನು ನೆಟ್ಟಿರುವ ತೆಂಗಿನ ಮರಗಳನ್ನು ಕಡಿದುಕೊ’ ಎಂದು ಸಿದ್ದಗಂಗಮ್ಮ ಹೇಳಿದ್ದರು. ಇದರಿಂದ ಸಿಟ್ಟಾದ ಕಾಳೇಗೌಡ ಹಾಗೂ ಅವರ ಮಕ್ಕಳು 42 ತೆಂಗಿನ ಮರಗಳನ್ನು ಕಡಿದು ಹಾಕಿದ್ದಾರೆ..
‘ನನ್ನ ಜಮೀನಿನಲ್ಲಿದ್ದ ತೆಂಗಿನ ಮರಗಳನ್ನು ಕಾಳೇಗೌಡ ಹಾಗೂ ಅವರ ಮಕ್ಕಳು ಕಡಿದು ಹಾಕಿದ್ದಾರೆ’ ಎಂದು ಸಿದ್ಧಗಂಗಮ್ಮ ಅವರು ದಂಡಿನಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.