ADVERTISEMENT

ತುಮಕೂರು | ಪಾಲಿಕೆಯಿಂದಲೇ ಗಾರೆನರಸಯ್ಯನ ಕಟ್ಟೆ ಒತ್ತುವರಿ: ಆರೋಪ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 4:30 IST
Last Updated 29 ಆಗಸ್ಟ್ 2024, 4:30 IST
ತುಮಕೂರಿನ ಗಾರೆನರಸಯ್ಯನ ಕಟ್ಟೆ ಹತ್ತಿರ ನಡೆಯುತ್ತಿರುವ ಕಾಮಗಾರಿ
ತುಮಕೂರಿನ ಗಾರೆನರಸಯ್ಯನ ಕಟ್ಟೆ ಹತ್ತಿರ ನಡೆಯುತ್ತಿರುವ ಕಾಮಗಾರಿ   

ತುಮಕೂರು: ನಗರದ ಗಾರೆನರಸಯ್ಯನ ಕಟ್ಟೆಯ ಒಂದು ಎಕರೆ ಜಾಗವನ್ನು ಮಹಾನಗರ ಪಾಲಿಕೆ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಲು ಮುಂದಾಗಿದೆ ಎಂದು ಪರಿಸರವಾದಿ, ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಆರೋಪಿಸಿದ್ದಾರೆ.

ತಂತಿ ಬೇಲಿ ಅಳವಡಿಸುವ ನೆಪದಲ್ಲಿ ಕಟ್ಟೆ ಅಂಗಳದ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ. ಕಟ್ಟೆಯು 19.1 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆಯ ಪಕ್ಕದಲ್ಲಿನ 2 ಎಕರೆ ಖರಾಬು ಜಾಗ ಸೇರಿ ಒಟ್ಟು 3 ಎಕರೆಯಲ್ಲಿ ಬಡಾವಣೆ ಮಾಡಲು ಉದ್ದೇಶಿಸಿದ್ದಾರೆ ಎಂದು ದೂರಿದ್ದಾರೆ.

2015ರಿಂದ ಈ ಭಾಗದ ನಾಗರಿಕರು ಸಂಬಂಧಪಟ್ಟ ವಾರ್ಡ್‌ನ ಸದಸ್ಯರು, ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಜಾಣ ಕುರುಡರಂತೆ ತಮ್ಮ ಅವಧಿ ಮುಗಿಸಿಕೊಂಡು ಹೋಗಿದ್ದಾರೆ. ಈಗಾಗಲೇ ಎರಡು ಎಕರೆ ಖರಾಬು ಜಾಗದ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಕೆರೆ–ಕಟ್ಟೆಗಳ ಅಂಗಳದಿಂದ 30 ಮೀಟರ್‌ ಒಳಗೆ ಯಾವುದೇ ಕಟ್ಟಡ ನಿರ್ಮಾಣ ಅಥವಾ ಅಭಿವೃದ್ಧಿ ಕಾರ್ಯಗಳಿಗೆ ಪರವಾನಗಿ ನೀಡಬಾರದು ಎಂಬ ನಿಯಮ ಇದೆ. ನಗರಾಭಿವೃದ್ಧಿ ಪ್ರಾಧಿಕಾರ, ಪಾಲಿಕೆಯ ಅಧಿಕಾರಿಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಕಟ್ಟೆಯ ಅಂಗಳದಲ್ಲಿ ಹಾಕಿರುವ ತಂತಿ ಬೇಲಿ ತೆರವುಗೊಳಿಸಿ ಉದ್ಯಾನವನ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಖರಾಬು ಜಾಗದಲ್ಲಿ ಬಡಾವಣೆ ಮಾಡಲು ನೀಡಿರುವ ಪರವಾನಗಿ ರದ್ದುಗೊಳಿಸಬೇಕು. ಇಲ್ಲಿ ಜಿಲ್ಲಾ ಕೆರೆ ಜಾಗೃತಿ ಮಾಹಿತಿ ಕೇಂದ್ರ ಸ್ಥಾಪಿಸಬೇಕು. ಕೋಡಿ ಹತ್ತಿರ ರಾಜ ಕಾಲುವೆ ಒತ್ತುವರಿ ತೆರವುಗೊಳಿಸಿ, ತ್ಯಾಜ್ಯ ಸುರಿಯುವುದನ್ನು ನಿಯಂತ್ರಿಸಬೇಕು. ಗಾರೆನರಸಯ್ಯನ ಕಟ್ಟೆ ಸಂರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.