ADVERTISEMENT

ಮಕ್ಕಳಿಗಾಗಿ ಪರಿಸರ ಶಿಬಿರ; ‘ಕಾಡ್ಗಿಚ್ಚು-ಕೀಟ ಕುಣಿತ’ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 6:08 IST
Last Updated 2 ಜೂನ್ 2024, 6:08 IST
ತುಮಕೂರು ತಾಲ್ಲೂಕಿನ ತಿಮ್ಮನಾಯಕನಹಳ್ಳಿಯಲ್ಲಿ ಈಚೆಗೆ ಮಕ್ಕಳು ‘ಕಾಡ್ಗಿಚ್ಚು-ಕೀಟ ಕುಣಿತ’ ನಾಟಕ ಪ್ರದರ್ಶಿಸಿದರು
ತುಮಕೂರು ತಾಲ್ಲೂಕಿನ ತಿಮ್ಮನಾಯಕನಹಳ್ಳಿಯಲ್ಲಿ ಈಚೆಗೆ ಮಕ್ಕಳು ‘ಕಾಡ್ಗಿಚ್ಚು-ಕೀಟ ಕುಣಿತ’ ನಾಟಕ ಪ್ರದರ್ಶಿಸಿದರು   

ತುಮಕೂರು: ತಾಲ್ಲೂಕಿನ ದೇವರಾಯನದುರ್ಗ ಬೆಟ್ಟದ ತಪ್ಪಲಿನ ತಿಮ್ಮನಾಯಕನಹಳ್ಳಿಯಲ್ಲಿ ಈಚೆಗೆ ‘ಕಾಡ್ಗಿಚ್ಚು- ಕೀಟ ಕುಣಿತ’ ಎಂಬ ಮಕ್ಕಳ ಪರಿಸರ ಶಿಬಿರ ನಡೆಯಿತು.

ಕಳೆದ ಒಂದು ತಿಂಗಳಿನಿಂದ ತಿಮ್ಮನಾಯಕನಹಳ್ಳಿಯಲ್ಲಿ ಮಕ್ಕಳ ಶಿಬಿರ ನಡೆಯಿತು. ಕಾಡಿಗೆ ಬೆಂಕಿ ಹಚ್ಚುವುದರಿಂದ ಕೀಟ, ಜೇಡ, ಹಾವು, ಕಪ್ಪೆಯಂತಹ ಜೀವಿಗಳಿಗೆ ಹಾನಿಯಾಗುವುದರ ಬಗ್ಗೆ ಮಕ್ಕಳು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಳಿಸಿಕೊಡಲಾಯಿತು.

ಮಕ್ಕಳು ಜೇಡ, ಕೀಟಗಳ ವೇಷ ಧರಿಸಿ, ಪರಿಸರ ವ್ಯವಸ್ಥೆಯಲ್ಲಿ ಕೀಟಗಳ ಮಹತ್ವದ ಕುರಿತು ನಾಟಕ ರೂಪದಲ್ಲಿ ರೂಪಕ ಪ್ರಸ್ತುತ ಪಡಿಸಿದರು. ಗ್ರಾಮಸ್ಥರಿಗೆ ಬೆಟ್ಟ ಮತ್ತು ಕಾಡಿಗೆ ಬೆಂಕಿ ಹಾಕುವುದರಿಂದ ಆಗುವ ಹಾನಿಯ ಬಗ್ಗೆ ಅರಿವು ಮೂಡಿಸಿದರು. ಕಲಾವಿದರಾದ ಜೈರಾಮ್, ವೆಂಕಟೇಶ್ ಮಕ್ಕಳ ನಾಟಕಕ್ಕೆ ಸಹಕಾರ ನೀಡಿದರು.

ADVERTISEMENT

ಈಚೆಗೆ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಪರಿಸರವಾದಿ ಬಿ.ವಿ.ಗುಂಡಪ್ಪ ಮಾತನಾಡಿ, ‘ಕೆಲವೊಂದು ಮೂಢನಂಬಿಕೆಗಳಿಂದ ಬೆಟ್ಟಕ್ಕೆ ಬೆಂಕಿ ಹಚ್ಚಲಾಗುತ್ತದೆ. ಅದರಿಂದ ವನ್ಯಜೀವಿ, ಸಸ್ಯ ಸಂಪತ್ತು, ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ. ಈ ರೀತಿ ಕಾಡು ನಾಶವಾದರೆ ಮನುಜ ಕುಲಕ್ಕೆ ಆಪತ್ತು ತಪ್ಪಿದ್ದಲ್ಲ. ಹಾಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.

ಶಿಬಿರದ ನಿರ್ದೇಶಕಿ ಎಸ್.ಆಶಾ, ‘ಬೇಸಿಗೆಯಲ್ಲಿ ಬೆಟ್ಟಗಳಿಗೆ ಬೆಂಕಿ ಹಾಕುವುದನ್ನು ತಡೆಯಲು ಪರಿಸರ ಶಿಬಿರ ಆಯೋಜಿಸಲಾಗಿತ್ತು. ಮಕ್ಕಳಿಗೆ ಪರಿಸರ ವ್ಯವಸ್ಥೆಯಲ್ಲಿರುವ ಚಿಕ್ಕ ಜೀವಿಗಳಾದ ಕೀಟ, ಜೇಡ, ಹಾವು, ಕಪ್ಪೆಗಳ ಜೀವನ ಕ್ರಮ, ಆಹಾರ ಮತ್ತು ಮತ್ತಿತರ ವಿಚಾರಗಳ ಬಗ್ಗೆ ತಿಳಿಸಿ ಕೊಡಲಾಯಿತು' ಎಂದರು.

ಡಮರುಗ ರಂಗ ಸಂಪನ್ಮೂಲ ಕೇಂದ್ರದ ದೇವರಾಜ್, ಜನಸ್ತು ಸಂಸ್ಥೆಯ ಟಿ.ಬಿ.ದಿನೇಶ್‌, ಶಿಬಿರದ ಆಯೋಜಕರಾದ ಜಯರಾಮ್, ಮಂಜು ಶಿಕಾರಿ, ಜಾನಿ, ಶೇಷಾದ್ರಿ, ವೈ.ಟಿ.ಲೋಹಿತ್‌ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.