ಪಾವಗಡ: ಫ್ಲೋರೊಸಿಸ್‌ನಿಂದ ಬಳಲುತ್ತಿದ್ದ ತಾಲ್ಲೂಕಿನ ಕರಿಯಮ್ಮನಪಾಳ್ಯದ ಗೀತಾಂಜಲಿ ಅವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಬುಧವಾರ ವ್ಹೀಲ್ ಚೇರ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ವಿತರಿಸಿದರು.
ಈಚೆಗೆ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಲ್ಲಿ ತಾಲ್ಲೂಕಿನ ಫ್ಲೋರೊಸಿಸ್ ಸಮಸ್ಯೆ ಬಗ್ಗೆ ವಿಶೇಷ ವರದಿ ಪ್ರಕಟಿಸಲಾಗಿತ್ತು. ಗ್ರಾಮದ ಗೀತಾಂಜಲಿ ಅವರ ಶೋಚನೀಯ ಸ್ಥಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕೂಡಲೇ ಸಮಸ್ಯೆಗೆ ಸ್ಪಂದಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯಲ್ಲಿನ ಫ್ಲೋರೊಸಿಸ್ ರೋಗದ ತೀವ್ರತೆ ಬಗ್ಗೆ ವಿವಿಧ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದ್ದರು. ರೋಗಿಗೆ ಅಗತ್ಯವಿರುವ ಔಷಧಿಗಳನ್ನು ವಿತರಿಸಿದ್ದರು.
ಈ ಹಿಂದೆ ಮಹಿಳೆಗೆ ಮೊಬಿಲಿಟಿ ಸಲಕರಣೆಗಳ ಅಗತ್ಯತೆಯ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇಲಾಖೆ ಪೂರೈಸಿದ ಸಲಕರಣೆಗಳನ್ನು ವಿತರಿಸಿ ಗೀತಾಂಜಲಿ ಅವರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದರು.
ಫ್ಲೋರೊಸಿಸ್ ಪೀಡಿತೆ ಗೀತಾಂಜಲಿ ಮಾತನಾಡಿ, ‘ಕೆಲ ದಿನಗಳ ಹಿಂದೆ ಫ್ಲೋರೊಸಿಸ್ ಸಮಸ್ಯೆಯಿಂದ ಓಡಾಡಲೂ ಸಾಧ್ಯವಾಗುತ್ತಿರಲಿಲ್ಲ. ನೋವು ತಾಳಲಾರದೆ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದೆ. ರಾತ್ರಿ ವೇಳೆ ನಿದ್ದೆ ಮಾಡಲಾಗದೆ ನರಕ ಯಾತನೆ ಅನುಭವಿಸುತ್ತಿದ್ದೆ. ಪತ್ರಿಕೆಯಲ್ಲಿ ಸಮಸ್ಯೆ ಬಗ್ಗೆ ವರದಿ ಪ್ರಕಟಿಸಿದ ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಗೆ ಬಂದು ಪರೀಕ್ಷೆಗಾಗಿ ಮಧುಗಿರಿಗೆ ಕರೆದೊಯ್ದರು. ವಿವಿಧ ಪರೀಕ್ಷೆಗಳನ್ನು ನಡೆಸಿ, ಚಿಕಿತ್ಸೆ, ಔಷಧಿಗಳನ್ನು ಕೊಡಿಸಿಕೊಟ್ಟರು’ ಎಂದು ವಿವರಿಸಿದರು.
‘ಇದೀಗ ವ್ಹೀಲ್‌ಚೇರ್ ಸೇರಿದಂತೆ ಸಲಕರಣೆಗಳ್ನು ಕೊಟ್ಟಿರುವುದು ಆತ್ಮವಿಶ್ವಾಸ ಮೂಡಿಸಿದೆ. ಇನ್ನೂ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ. ವಾಕರ್, ವಿಟಮಿನ್ ಮಾತ್ರೆ, ಇತ್ಯಾದಿ ಔಷಧಿಗಳು ಬೇಕಿದೆ. ಔಷಧಿ, ವಾಕರ್ ಕೊಡಿಸುವುದಾಗಿ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ ಪತ್ರಿಕೆ ಹಾಗೂ ಸಮಸ್ಯೆಗೆ ಸ್ಪಂದಿಸಿ ಚಿಕಿತ್ಸೆ ಕೊಡಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ರಾಮಾಂಜಿನೇಯ, ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್, ಹಿರಿಯ ಪುರುಷ ಸಹಾಯಕ, ಚಂದ್ರಶೇಖರ್, ಕಿರಿಯ ಪುರುಷ ಸಹಾಯಕ ಅನಿಲ್ ಕುಮಾರ್, ನರಸಿಂಹ ಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.