ADVERTISEMENT

ಎತ್ತಿನಹೊಳೆ: ಭೂಸ್ವಾಧೀನ ಅಭಿಯಾನ 

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 14:16 IST
Last Updated 13 ನವೆಂಬರ್ 2024, 14:16 IST

ತಿಪಟೂರು: ತಾಲ್ಲೂಕಿನ ಎತ್ತಿನಹೊಳೆ ಯೋಜನೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಕಾಮಗಾರಿ ಮಾಡುವ ಸಲುವಾಗಿ ನವೆಂಬರ್ 14 ಮತ್ತು 15ರಂದು ತಾಲ್ಲೂಕು ಆಡಳಿತ ಸೌಧದಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರವೇಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಎತ್ತಿನಹೊಳೆ ಭೂಸ್ವಾಧೀನ ಅಭಿಯಾನ ಆಯೋಜಿಸಲಾಗಿದ್ದು, ಇದರ ಅಂಗವಾಗಿ ರೈತರು ಜಮೀನಿಗೆ ಸಂಬಂಧಪಟ್ಟ ಪೂರಕ ದಾಖಲೆ ನೀಡುವಂತೆ ತಿಳಿಸಲಾಗಿದೆ ಎಂದು ಉಪವಿಭಾಗಧಿಕಾರಿ ಸಪ್ತಶ್ರೀ ತಿಳಿಸಿದರು.

ತಾಲ್ಲೂಕಿನ 31 ಗ್ರಾಮಗಳ ಮೂಲಕ 43 ಕಿ.ಮೀ ವ್ಯಾಪ್ತಿಯಲ್ಲಿ ಯೋಜನೆ ಪ್ರಾರಂಭವಾಗಿದ್ದು, 921 ಎಕರೆ ಭೂಸ್ವಾಧೀನವಾಗಿದೆ. 1,046 ರೈತ ಖಾತೆದಾರರು ಭೂಮಿ ಕಳೆದುಕೊಂಡಿದ್ದು, ಈಗಾಗಲೇ ಪರಿಹಾರದ ಮೊತ್ತ ₹126 ಕೋಟಿ ಪಾವತಿಯಾಗಿದೆ. ಶೆಟ್ಟಿಹಳ್ಳಿ, ಭೈರಾಪುರ, ಚೌಡ್ಲಾಪುರ ಸೇರಿದಂತೆ ಉಳಿದ 425 ರೈತರಿಗೆ 15 ದಿನಗಳ ಹಿಂದೆ ಜಿಲ್ಲಾಧಿಕಾರಿ ಅದೇಶದಂತೆ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ರೈತರ ಬಳಿ ತೆರಳಿ ಅವರಿಗೆ ಯೋಜನೆ ಪ್ರಮಾಣಪತ್ರ ನೀಡಿದ್ದರೂ ಭೂಸ್ವಾಧೀನಕ್ಕೆ ಒಳಪಟ್ಟ ರೈತರು ತುಮಕೂರಿನ ಭೂಸ್ವಾಧೀನ ಕಚೇರಿಗೆ ತೆರಳಿ ದಾಖಲಾತಿಗಳನ್ನು ಸಲ್ಲಿಸಿಲ್ಲ ಎಂದರು.

ತುರವೇಕೆರೆ ತಾಲ್ಲೂಕಿನಲ್ಲಿ 61 ಖಾತೆದಾರರಿಗೆ ₹7 ಕೋಟಿ ಜಮಾವಾಗಿದ್ದು, 8 ರೈತರ ದಾಖಲೆ ಬಾಕಿಯಿದ್ದು, ₹3.4 ಕೋಟಿಯನ್ನು ಪಾವತಿಸಬೇಕಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 11 ಗ್ರಾಮಗಳ ಪೈಕಿ 166 ಎಕರೆ ಭೂಸ್ವಾಧೀನವಾಗಿದ್ದು, 64 ರೈತರಲ್ಲಿ 31 ರೈತರು ದಾಖಲೆಗಳನ್ನು ಸಲ್ಲಿಸಬೇಕಿದೆ. ₹12 ಕೋಟಿ ಬಾಕಿ ಇದೆ. ಆದ್ದರಿಂದ ಮೂರು ತಾಲ್ಲೂಕಿನ ದಾಖಲೆಗಳನ್ನು ಸಲ್ಲಿಸಲು ಬಾಕಿಯಿರುವ ರೈತರು ನವಂಬರ್ 14 ಮತ್ತು 15ರಂದು ತಿಪಟೂರು ತಾಲ್ಲೂಕು ಆಡಳಿತ ಸೌಧ ಉಪವಿಭಾಗಧಿಕಾರಿ ಕಚೇರಿಯಲ್ಲಿ ಸೂಕ್ತ ದಾಖಲೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ADVERTISEMENT

ಗೋಷ್ಠಿಯಲ್ಲಿ ತಹಶೀಲ್ದಾರ್ ಪವನ್‌ಕುಮಾರ್, ವಿಶೇಷ ಭೂಸ್ವಾಧೀನಧಿಕಾರಿ ಮಂಜುನಾಥ್, ಯೋಜನೆಯ ಎಇ ಶಶಾಂಕ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.