ADVERTISEMENT

ತುಮಕೂರು | ಮುಂದಿನ ವರ್ಷ ಜಿಲ್ಲೆಗೆ ಎತ್ತಿನಹೊಳೆ ನೀರು: ಪರಮೇಶ್ವರ

ಜಿಲ್ಲೆಗೆ 5.470 ಟಿಎಂಸಿ ನೀರು ಹಂಚಿಕೆ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 15:50 IST
Last Updated 4 ಸೆಪ್ಟೆಂಬರ್ 2024, 15:50 IST
ಎತ್ತಿನಹೊಳೆ ಕಾಮಗಾರಿ
ಎತ್ತಿನಹೊಳೆ ಕಾಮಗಾರಿ   

ತುಮಕೂರು: ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಸೆ. 8ರಂದು ಚಾಲನೆ ನೀಡಲಾಗುತ್ತಿದೆ. ಜಿಲ್ಲೆಗೆ ಮುಂದಿನ ವರ್ಷ ನೀರು ಹರಿದು ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಬುಧವಾರ ತಿಳಿಸಿದರು.

ಜಿಲ್ಲೆಯಲ್ಲಿ 150 ಕಿ.ಮೀ ಮುಖ್ಯ ನಾಲೆ ಹಾದು ಹೋಗಲಿದ್ದು, ಇದರಲ್ಲಿ 102 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. 121 ಕಿ.ಮೀ ಸಂಪರ್ಕ ಕಾಲುವೆಯಲ್ಲಿ 106 ಕಿ.ಮೀ ಪೂರ್ಣಗೊಂಡಿದೆ. 2025ರ ಜುಲೈ ವೇಳೆಗೆ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳ್ಳಲಿದ್ದು, ನಂತರ ಜಿಲ್ಲೆಗೆ ನೀರು ಹರಿಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ಅಡಿಗಳಷ್ಟು ನೀರು ಲಭ್ಯವಾಗಲಿದ್ದು, ಅದರಲ್ಲಿ ಜಿಲ್ಲೆಗೆ 5.470 ಟಿಎಂಸಿ ಹಂಚಿಕೆಯಾಗಿದೆ. 2.294 ಟಿಎಂಸಿ ಕುಡಿಯುವ ನೀರಿಗೆ, 3.446 ಟಿಎಂಸಿ ನೀರನ್ನು ಸಣ್ಣ ನೀರಾವರಿಯ 113 ಕೆರೆಗಳಿಗೆ ಭರ್ತಿ ಮಾಡಲಾಗುತ್ತದೆ. ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಕುಡಿಯುವ ನೀರಿಗಾಗಿ 0.20 ಟಿಎಂಸಿ ಮೀಸಲಿಡಲಾಗಿದೆ ಎಂದು ವಿವರಿಸಿದರು.

ADVERTISEMENT

ಒಟ್ಟು 3,117 ಎಕರೆ ಭೂಮಿಯ ಅಗತ್ಯವಿದ್ದು, 2,022 ಎಕರೆ ಭೂಮಿಗೆ ಹಣ ಮಂಜೂರಾಗಿ, ಭೂಸ್ವಾಧೀನವಾಗಿದೆ. 80ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಇದಕ್ಕೆ ₹1,200 ಕೋಟಿ ಹಣ ಬೇಕಿದ್ದು, ಈಗಾಗಲೇ ₹448 ಕೋಟಿ ಪರಿಹಾರ ನೀಡಲಾಗಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ₹434 ಕೋಟಿ ಬಾಕಿ ಇದೆ. ₹397 ಕೋಟಿ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಂತೆ ಹಂತಹಂತವಾಗಿ ಹಣ ಮಂಜೂರು ಮಾಡಲಾಗುವುದು‌. ಜಿಲ್ಲೆಯಲ್ಲಿ 63 ಎಕರೆ ಅರಣ್ಯ ಭೂಮಿ ಈ ಯೋಜನೆ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.

2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹12,912.36 ಕೋಟಿ ಹಣವನ್ನು ಬಜೆಟ್‌ನಲ್ಲಿ ಒದಗಿಸಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದರು. ಈಗ ಯೋಜನೆಯ ಮೊತ್ತ ₹23,251 ಕೋಟಿಗೆ ಏರಿಕೆಯಾಗಿದ್ದು, 2027ಕ್ಕೆ ಪೂರ್ಣಗೊಂಡು, ನಂತರ ಎಲ್ಲಾ ಜಿಲ್ಲೆಗಳಿಗೆ ನೀರು ಲಭ್ಯವಾಗಲಿದೆ ಎಂದರು.

ಹೇಮಾವತಿ: ಗೊರೂರು ಜಲಾಶಯದಿಂದ ಜಿಲ್ಲೆಗೆ ಜುಲೈ 22ರಿಂದ ಆ. 25ರ ವರೆಗೆ 3,915 ಎಂಸಿಎಫ್‌ಟಿ ಹೇಮಾವತಿ ನೀರು ಹರಿದು ಬಂದಿದೆ. ಪ್ರತಿ ದಿನ 1,500 ಕ್ಯೂಸೆಕ್ ನೀರು ಬರುತ್ತಿದ್ದು, ಕುಣಿಗಲ್‌ವರೆಗೂ ಹರಿದು ಹೋಗುತ್ತಿದೆ. ಬುಗುಡನಹಳ್ಳಿ ಕೆರೆಯಲ್ಲಿ 290 ಎಂಸಿಎಫ್‌ಟಿ ಸಂಗ್ರಹವಿದೆ. ಸಣ್ಣನೀರಾವರಿ ಇಲಾಖೆ ವ್ಯಾಪ್ತಿಯ 27 ಕೆರೆಗಳು ಭರ್ತಿಯಾಗಿವೆ ಎಂದು ತಿಳಿಸಿದರು.

ನಾಲೆ ಎಲ್ಲಿ? ಎಷ್ಟು?

ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ನಾಲೆಯು ತಿಪಟೂರು ತಾಲ್ಲೂಕಿನಲ್ಲಿ 43 ಕಿ.ಮೀ ಚಿಕ್ಕನಾಯಕನಹಳ್ಳಿ 12 ಕಿ.ಮೀ ತುರುವೇಕೆರೆ 1 ಕಿ.ಮೀ ಗುಬ್ಬಿ 41 ಕಿ.ಮೀ ತುಮಕೂರು 31 ಕಿ.ಮೀ ಕೊರಟಗೆರೆ 19 ಕಿ.ಮೀ ಮಧುಗಿರಿ (ಸಂಪರ್ಕ ಕಾಲುವೆ) 40 ಕಿ.ಮೀ ಪಾವಗಡ ತಾಲ್ಲೂಕಿನಲ್ಲಿ 42 ಕಿ.ಮೀ ನಾಲೆ ಹಾದುಹೋಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.