ADVERTISEMENT

ತುಮಕೂರು | ರಸ್ತೆಗಿಳಿಯದ ದುಬಾರಿ ‘ಸಂಚಾರಿ’ ಶೌಚಾಲಯ

ಶೌಚಾಲಯಕ್ಕೆ ₹15 ಲಕ್ಷ ಖರ್ಚು! ಮಳೆ, ಬಿಸಿಲಿಗೆ ಹಾಳು

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 6:15 IST
Last Updated 23 ಜೂನ್ 2024, 6:15 IST
<div class="paragraphs"><p>ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ನಿಂತಿರುವ ‘ಸಂಚಾರಿ’ ಶೌಚಾಲಯ</p></div>

ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ನಿಂತಿರುವ ‘ಸಂಚಾರಿ’ ಶೌಚಾಲಯ

   

ತುಮಕೂರು: ಮಹಾನಗರ ಪಾಲಿಕೆಯಿಂದ ₹15 ಲಕ್ಷ ವೆಚ್ಚದಲ್ಲಿ ಹೊಸದಾಗಿ ಖರೀದಿಸಿ ತಂದಿರುವ ದುಬಾರಿ ‘ಸಂಚಾರಿ’ ಶೌಚಾಲಯ ಪಾಲಿಕೆ ಆವರಣ ಬಿಟ್ಟು ಹೊರ ಬಂದಿಲ್ಲ. ಈವರೆಗೆ ಜನರ ಬಳಕೆಗೆ ಲಭ್ಯವಾಗಿಲ್ಲ.

ಅಧಿಕಾರಿಗಳು ಜನರ ಸಮಸ್ಯೆ ಅರಿತು ‘ಸಂಚಾರಿ’ ಶೌಚಾಲಯ ಆರಂಭಿಸಲು ಯೋಜನೆ ರೂಪಿಸಿದ್ದರು. ಅಗತ್ಯ ಇರುವ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಬಳಕೆಗೆ ನೀಡುವ ಉದ್ದೇಶದಿಂದ ಖರೀದಿಸಲಾಗಿತ್ತು. ಆದರೆ, ಕಳೆದ ಒಂದೂವರೆ ತಿಂಗಳಿನಿಂದ ಮಳೆ, ಬಿಸಿಲಿಗೆ ಶೌಚಾಲಯ ಹಾಳಾಗುತ್ತಿದೆ. ನಿಂತಲ್ಲಿಯೇ ನಿಂತು ತುಕ್ಕು ಹಿಡಿಯುವ ಹಂತ ತಲುಪಿದೆ. ಜನರು ಬಳಸುವ ಮುನ್ನವೇ ಗುಜರಿ ಸೇರುವ ಲಕ್ಷಣಗಳು ಕಾಣಿಸುತ್ತಿವೆ.

ADVERTISEMENT

‘ಜಡ್ಡು ಹಿಡಿದ ಪಾಲಿಕೆಯ ಆಡಳಿತ ವ್ಯವಸ್ಥೆಗೆ ಇದೊಂದು ಸೂಕ್ತ ನಿದರ್ಶನ. ಜನರ ಲಕ್ಷಾಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿ ಖರೀದಿಸಿರುವ ಶೌಚಾಲಯಕ್ಕೆ ಬೀಗ ಹಾಕಿ ಮೂಲೆಯಲ್ಲಿ ನಿಲ್ಲಿಸಲಾಗಿದೆ. ಈ ವಿಷಯ ಆಯುಕ್ತರ ಗಮನದಲ್ಲಿದ್ದರೂ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ’ ಎಂದು ನಗರದ ಶ್ರೀನಿವಾಸ್‌ ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ 13 ಸಾರ್ವಜನಿಕ, 10 ಸಮುದಾಯ ಶೌಚಾಲಯಗಳಿವೆ. ಪ್ರತಿ ನಿತ್ಯ ಸಾವಿರಾರು ಜನರು ನಗರಕ್ಕೆ ಭೇಟಿ ನೀಡುತ್ತಾರೆ. ಹೆಚ್ಚಿನ ಜನ ಸೇರುವ ಕಡೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಹೊರಗಡೆಯಿಂದ ಬಂದವರಿಗೆ ಬಯಲೇ ಗತಿಯಾಗಿದೆ. ಹಲವು ಕಡೆ ನಿರ್ವಹಣೆ ಕೊರತೆಯಿಂದ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ.

ಜೂನಿಯರ್‌ ಕಾಲೇಜು ಮೈದಾನದಲ್ಲಿ ಸ್ಮಾರ್ಟ್‌ ಸಿಟಿಯಿಂದ ನಿರ್ಮಿಸಿರುವ 4 ಶೌಚಾಲಯಗಳಿಗೆ ಬಾಗಿಲು ಹಾಕಲಾಗಿದೆ. ಉಪ್ಪಾರಹಳ್ಳಿ 60 ಅಡಿ ರಸ್ತೆಯ 1ನೇ ಅಡ್ಡ ರಸ್ತೆ ಬಳಿ ಮಹಾನಗರ ಪಾಲಿಕೆಯಿಂದ ಆರಂಭಿಸಿದ್ದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಿ ಹಲವು ವರ್ಷಗಳೇ ಕಳೆದಿವೆ. ಬನಶಂಕರಿ ಮುಖ್ಯರಸ್ತೆಯಲ್ಲಿರುವ ಸಮುದಾಯ ಶೌಚಾಲಯದ ಪರಿಸ್ಥಿತಿಯೂ ಇದೇ ರೀತಿ ಇದೆ.

ಸಿದ್ಧಗಂಗಾ ಮಹಿಳಾ ಕಾಲೇಜು ಮುಂಭಾಗದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಸುಮಾರು ತಲಾ ₹10 ಲಕ್ಷ ವೆಚ್ಚದಲ್ಲಿ ಆರಂಭಿಸಿದ್ದ 2 ಸ್ಮಾರ್ಟ್‌ ಶೌಚಾಲಯಗಳು ಈಗ ಮೂಲೆ ಸೇರಿವೆ. ಹಾಳಾದ ಶೌಚಾಲಯಗಳನ್ನು ಸರಿ ಮಾಡುವುದು ಬಿಟ್ಟು, ಹೊಸದಾಗಿ ‘ಸಂಚಾರಿ’ ಶೌಚಾಲಯ ಖರೀದಿಸಿದ್ದಕ್ಕೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

‘ಈಗಿರುವ ಶೌಚಾಲಯ ಸರಿಪಡಿಸಿದ್ದರೆ ಸಾಕಾಗಿತ್ತು. ಇದನ್ನು ಬಿಟ್ಟು ₹15 ಲಕ್ಷ ಖರ್ಚು ಮಾಡಿ ಸಂಚಾರಿ ಶೌಚಾಲಯ ಖರೀದಿಸಲಾಗಿದೆ. ಇದರ ಅವಶ್ಯಕತೆಯೇ ಇರಲಿಲ್ಲ. ಸಾರ್ವಜನಿಕರ ಹಣ ಹೇಗೆ ಪೋಲು ಮಾಡಬೇಕು, ಕಮಿಷನ್ ಯಾವ ರೀತಿ ಪೀಕಬೇಕು ಎಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಅಧಿಕಾರಿಗಳು ಹಣ ಲೂಟಿ ಹೊಡೆಯಲು ಇಂತಹ ಕೆಲಸ ಮಾಡುತ್ತಾರೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಕೆಲವು ದಿನಗಳ ಕಾಲ ಜನರ ಬಳಕೆಗೆ ನೀಡಿ ವಾಹನ ಹಾಳಾಗಿದೆ ಎಂದು ಮತ್ತೆ ಮೂಲೆಗೆ ಹಾಕುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಅಧಿಕಾರಿಗಳು ಆಡಿದ್ದೇ ಆಟವಾಗುತ್ತದೆ’ ಎಂದು ನಗರದ ರಾಮಮೂರ್ತಿ ಅಸಮಾಧಾನ ತೋಡಿಕೊಂಡರು.

ಈ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಪಾಲಿಕೆ ಆಯುಕ್ತರಾದ ಬಿ.ಜಿ.ಅಶ್ವಿಜ ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.