ADVERTISEMENT

ತುಮಕೂರು | ಎಕ್ಸ್‌ಪ್ರೆಸ್‌ ಕೆನಾಲ್‌: ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 6:53 IST
Last Updated 24 ಜೂನ್ 2024, 6:53 IST
ಸೈಯದ್ ಮುಜೀಬ್
ಸೈಯದ್ ಮುಜೀಬ್   

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿಯ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಮತ್ತು ರಾಜ್ಯದ ಸಚಿವರು ಮುಂದಾಗಬೇಕು ಎಂದು ಸಿಪಿಎಂ ಒತ್ತಾಯಿಸಿದೆ.

ಜಿಲ್ಲೆಯ ಜನರು ಬರದಿಂದ ನಲುಗಿ ಹೋಗಿದ್ದಾರೆ. ಕಳೆದ ವರ್ಷ ಬೆಳೆ ಉಳಿಸಿಕೊಳ್ಳಲು ಪರದಾಡಿದ್ದರು. ಇದೀಗ ಎಕ್ಸ್‌ಪ್ರೆಸ್‌ ಕೆನಾಲ್‌ ಕಾಮಗಾರಿ ಆರಂಭಿಸಲಾಗಿದೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ ಮುಜೀಬ್‌, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ತಿಳಿಸಿದ್ದಾರೆ.

ಜಿಲ್ಲೆಯ ರೈತರು, ನಾಗರಿಕರು ಕುಡಿಯಲು, ನೀರಾವರಿಗಾಗಿ ಹೇಮಾವತಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.‌ ನೀರಿನ ಹಂಚಿಕೆಯ ವ್ಯತ್ಯಯವು ತೀವ್ರವಾದ ಕುಡಿಯುವ ನೀರು ಹಾಗೂ ಕೃಷಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಇದನ್ನು ಅರಿತು ಈ ಹಿಂದೆ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಯೋಜನೆ ರದ್ದು ಪಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು.  ಕಾಮಗಾರಿಯ ಗೊಂದಲದ ಬಗ್ಗೆ ಸಚಿವರು ಜಿಲ್ಲೆಯ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಸೂಕ್ಷ್ಮ ವಿಷಯದಲ್ಲಿ ಸರ್ಕಾರ ಕೇವಲ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡು ಜಿಲ್ಲೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರನ್ನು ಪರಸ್ಪರ ವಿರೋಧಿಗಳಂತೆ ಚಿತ್ರಿಸುವ ಅಪಾಯವೂ ಇದೆ. ಸಂಬಂಧಪಟ್ಟ ಸಚಿವರು ಸಭೆ ನಡೆಸಿ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳಬೇಕು. ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.