ಮಧುಗಿರಿ: ತಾಲ್ಲೂಕಿನಲ್ಲಿ ಕ್ರೀಡೆಗೆ ಪೂರಕವಾದ ವಾತಾವರಣವಿಲ್ಲದ ಕಾರಣ ಸಾಕಷ್ಟು ಕ್ರೀಡಾ ಪ್ರತಿಭೆಗಳು ಗ್ರಾಮಗಳಿಗೆ ಸೀಮಿತವಾಗುವಂತಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣ ವಿಶಾಲ ಸ್ಥಳವನ್ನು ಹೊಂದಿದೆ. 1994ರ ಫೆಬ್ರುವರಿ 22ರಂದು ಅಂದಿನ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಶಾಸಕ ಡಾ.ಜಿ.ಪರಮೇಶ್ವರ ಕ್ರೀಡಾಂಗಣದ ಪೆವಿಲಿಯನ್ ಕಟ್ಟಡವನ್ನು ಉದ್ಘಾಟಿಸಿದ್ದರು. ಆನಂತರ ಈವರೆಗೂ ಕ್ರೀಡಾಂಗಣ ಅಭಿವೃದ್ಧಿ ಇಲ್ಲದೆ ಸೊರಗುತ್ತಿದೆ. ಮಳೆ ಬಂದರೆ ಕ್ರೀಡಾಂಗಣ ಕೆಸರು ಗದ್ದೆಯಾಗಿ, ಬಿಸಿಲು ಹೆಚ್ಚಾದರೆ ಕುಳಿತುಕೊಳ್ಳಲು ಸ್ಥಳವಿಲ್ಲದಂತಾಗುತ್ತಿದೆ.
ಬೀದಿ ನಾಯಿಗಳು ಮತ್ತು ಹಂದಿಗಳು ಕ್ರೀಡಾಂಗಣದಲ್ಲಿ ಸದಾ ಬೀಡು ಬಿಟ್ಟಿರುತ್ತವೆ. ಬೆಳಿಗ್ಗೆ ಮತ್ತು ಸಂಜೆ ಸಾಕಷ್ಟು ಜನರು ವಾಯುವಿಹಾರಕ್ಕೆ ಬರುತ್ತಾರೆ. ಸುಸಜ್ಜಿತವಾದ ಶೌಚಾಲಯ ಕಟ್ಟಡವಿದ್ದರೂ, ಬಳಕೆ
ಯಾಗುತ್ತಿಲ್ಲ. ಜನರು ಕ್ರೀಡಾಂಗಣದ ಬದಿಯಲ್ಲಿಯೇ ಮಲ, ಮೂತ್ರ ವಿಸರ್ಜಿಸುತ್ತಿದ್ದಾರೆ. ಶೌಚಾಲಯ ನಿರ್ವಹಣೆ ಇಲ್ಲದೇ, ಸದಾ ಬಾಗಿಲು ಮುಚ್ಚಿಕೊಂಡಿರುತ್ತದೆ ಎನ್ನುವುದು ಜನರ ದೂರು.
ಕ್ರೀಡಾಂಗಣದಲ್ಲಿ 2014–15ನೇ ಸಾಲಿನಲ್ಲಿ ಅಂದಿನ ಶಾಸಕರಾಗಿದ್ದ ಕೆ.ಎನ್.ರಾಜಣ್ಣ ಕುಡಿಯುವ ನೀರಿಗಾಗಿ ಕೊಳವೆ ಬಾವಿ, ಸಿಸ್ಟನ್, ವಿದ್ಯುತ್ ಸೌಲಭ್ಯ ಹಾಗೂ ಶೌಚಾಲಯ ನಿರ್ಮಿಸಿದ್ದರು. ಗುತ್ತಿಗೆದಾರರ ಸಂಘದಿಂದ ಸಿಮೆಂಟ್ ಬೆಂಚ್ ಹಾಕಲಾಗಿದೆ. ಕ್ರೀಡಾಂಗಣದ ಸುತ್ತಲೂ ವಿದ್ಯುತ್ ಸೌಲಭ್ಯ ಇದೆ. ಆದರೆ ಅಗೊಮ್ಮೆ-ಈಗೊಮ್ಮೆ ಬೆಳಕು ನೀಡುತ್ತಿವೆ. ನೀರಿನ ಸಿಸ್ಟನ್ ಹಾಗೂ ಶೌಚಾಲಯ ಸರಿಯಾಗಿ ನಿರ್ವಹಣೆ ಇಲ್ಲದೇ ಹಾಳಾಗಿದೆ.
ಶಾಸಕ ಎಂ.ವಿ.ವೀರಭದ್ರಯ್ಯ ಅವರ ಅನುದಾನದಲ್ಲಿ ₹7 ಲಕ್ಷದ ಕಾಪೌಂಡ್ ನಿರ್ಮಿಸಲಾಗಿದೆ. ಕ್ರೀಡಾಂಗಣಕ್ಕೆ ಗೇಟ್ ಇಲ್ಲದ ಕಾರಣ ಕಿಡಿಗೇಡಿಗಳು ಜನ್ಮದಿನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಚರಿಸಿ, ಕೇಕ್ ಕತ್ತರಿಸಿ, ಮದ್ಯ ಕುಡಿದು ಬೇಕಾಬಿಟ್ಟಿ ಬಾಟಲಿಗಳನ್ನು ಎಸೆದು ಹೋಗುತ್ತಾರೆ. ಇದಕ್ಕೆ ಕಡಿವಾಣ ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಆರೋಪ.
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬ ಹಾಗೂ ರಾಜಕೀಯ ಸಮಾವೇಶಗಳು ಮಾಡುವಾಗ ಪುರಸಭೆ ಸಿಬ್ಬಂದಿ ಬೆಳೆದಿರುವ ಮುಳ್ಳಿನ ಗಿಡ ಗಂಟಿಗಳನ್ನು ತೆರವುಗೊಳಿಸುತ್ತಾರೆ. ಬೇರೆ ಸಮಯದಲ್ಲಿ ಆಟವಾಡುವವರು ಮತ್ತು ವಾಯುವಿಹಾರ ಮಾಡುವವರು ಮುಳ್ಳಿನ ಗಿಡಗಳಲ್ಲಿ ಆಟವಾಡುವ ಹಾಗೂ ಸಂಚರಿಸುವ ಸ್ಥಿತಿ ಇದೆ. ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಕ್ರೀಡಾಪಟುಗಳು ಮುಳ್ಳಿನ ಗಿಡಗಳ ಮಧ್ಯಯೇ ಓಟ ಮತ್ತು ಆಟಗಳನ್ನು ಆಡಬೇಕಿದೆ.
ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್, ವಾಲಿಬಾಲ್, ಕ್ರಿಕೆಟ್, ಕಬಡ್ಡಿ, ಕೋಕೊ, ನೆಟ್ ಬಾಲ್, ಥ್ರೋ ಬಾಲ್ ಕೋರ್ಟ್, ಅಥ್ಲಟಿಕ್ಸ್ ಟ್ರ್ಯಾಕ್ ಇಲ್ಲದ ಕಾರಣ ಮಕ್ಕಳು ಕ್ರೀಡೆಗಳನ್ನೇ ಮರೆತು ವಿಡಿಯೊ ಗೇಮ್‌ಗಳತ್ತ ಮುಖ ಮಾಡುತ್ತಿದ್ದಾರೆ. ತಾಲ್ಲೂಕು ಕ್ರೀಡಾಂಗಣದಲ್ಲಿಯೇ ಯಾವುದೇ ಸೌಲಭ್ಯ ಇಲ್ಲದೆ ಕ್ರೀಡಾಸಕ್ತರು ಅನಿವಾರ್ಯವಾಗಿ ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.
ತಾಲ್ಲೂಕಿನಲ್ಲಿರುವ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿದರೇ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಗೌರವ ಹೆಚ್ಚಿಸುತ್ತಾರೆ ಎನ್ನುವುದು ಕ್ರೀಡಾಸಕ್ತರ ನುಡಿ.
ಕ್ರೀಡಾಂಗಣ ಉದ್ಘಾಟನೆಗೊಂಡು ಹಲವಾರು ವರ್ಷಗಳು ಕಳೆದರೂ ಹೊರಾಂಗಣದ ಕ್ರೀಡೆಗೆ ಸೌಲಭ್ಯಗಳಿಲ್ಲ. ತರಬೇತುದಾರರು ಇಲ್ಲದೇ ನೆಪ ಮಾತ್ರಕ್ಕೆ ಕ್ರೀಡಾಂಗಣವಾಗಿದೆ ಎನ್ನುವುದು ಕ್ರೀಡಾಪಟುಗಳ ದೂರು.
ಹೊರಾಂಗಣದ ಕ್ರೀಡೆ
ಹಾಗೂ ಒಳಾಂಗಣ ಕ್ರೀಡಾಂಗಣ
ನಿರ್ಮಾಣಗೊಂಡು ಉತ್ತಮ
ತರಬೇತುದಾರರು ನೇಮಕ
ಗೊಂಡರೆ, ಸಾಕಷ್ಟು ಮಕ್ಕಳಿಗೆ ಅನುಕೂಲ
ವಾಗುತ್ತದೆ. ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ
ಸಿಗುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಸಚಿವರು ಗಮನ ಹರಿಸಬೇಕು ಎನ್ನುವುದು ಕ್ರೀಡಾಪಟುಗಳು ಹಾಗೂ ಪೋಷಕರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.