ತುಮಕೂರು: ಆಹಾರ ಧಾನ್ಯ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದ ಎರಡು ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತಿನಲ್ಲಿ ಇಡಲಾಗಿದೆ ಎಂದು ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ.ಎಚ್.ಕೃಷ್ಣ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದರು. ಗುಬ್ಬಿ ತಾಲ್ಲೂಕಿನ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿ, ತಿಪಟೂರು ಪಟ್ಟಣದ ದೊಡ್ಡಪೇಟೆ ಬಡಾವಣೆಯ ವಿನಾಯಕ ವಿವಿಧೋದ್ದೇಶ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ನಡೆಸಲಾಗಿದೆ. ಸಗಟು ಮಳಿಗೆ, ನ್ಯಾಯಬೆಲೆ ಅಂಗಡಿ, ಹಾಸ್ಟೆಲ್, ವಸತಿ ನಿಲಯ, ಅಂಗನವಾಡಿ ಕೇಂದ್ರ, ಪೆಟ್ರೋಲ್ ಬಂಕ್, ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಗೋದಾಮುಗಳಲ್ಲಿ ಸುಮಾರು 300 ಕ್ವಿಂಟಲ್ ಆಹಾರ ಧಾನ್ಯದ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದರು.
ಕುಣಿಗಲ್‌ನ ವಾನಂಬಾಡಿ ಕಾಲೊನಿ ಅಂಗನವಾಡಿ ಕೇಂದ್ರ ದನದ ಕೊಟ್ಟಿಗೆಯಂತಾಗಿದೆ. ಇದು ಅಂಗನವಾಡಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಸ್ವಚ್ಛಗೊಳಿಸಬೇಕು. ಪೆಟ್ರೋಲ್ ಬಂಕ್‌ನ ಶೌಚಾಲಯಗಳು ಅಧ್ವಾನ ಸ್ಥಿತಿಯಲ್ಲಿವೆ. ಗ್ರಾಹಕರಿಗೆ ಕನಿಷ್ಠ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.
ಆಹಾರ ಆಯೋಗ ಸದಸ್ಯರಾದ ಲಿಂಗರಾಜ್ ಕೋಟೆ, ಸುಮಂತ್ ರಾವ್, ಮಾರುತಿ ಎಂ.ದೊಡ್ಡಲಿಂಗಣ್ಣವರ, ಕೆ.ಎಸ್.ವಿಜಯಲಕ್ಷ್ಮಿ, ಎ.ರೋಹಿಣಿ ಪ್ರಿಯ, ಆಹಾರ ಆಯೋಗದ ಕಾರ್ಯದರ್ಶಿ ಸುಜಾತ ಹೊಸ್ಮನಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು ಇತರರು ಹಾಜರಿದ್ದರು.
ವಿದ್ಯಾರ್ಥಿಗಳನ್ನು ಕುರಿಮಂದೆಯಂತೆ ತುಂಬಿದ್ದಾರೆ: ಅಸಮಾಧಾನ ನಗರದ ಬಟವಾಡಿಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನ ಒಂದು ಚಿಕ್ಕ ಕೊಠಡಿಯಲ್ಲಿ 30 ಮಂದಿಯನ್ನು ಕುರಿಮಂದೆಯಂತೆ ತುಂಬಿದ್ದಾರೆ ಎಂದು ಅಧ್ಯಕ್ಷ ಡಾ.ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು. ಹಾಸ್ಟೆಲ್‌ನಲ್ಲಿ ಕೇವಲ ಒಂದೇ ಶೌಚಾಲಯ ಇದೆ. ಚಳಿ ಮಳೆಗಾಲದಲ್ಲೂ ಸ್ನಾನಕ್ಕೆ ಬಿಸಿ ನೀರು ಸಿಗಲ್ಲ. ಶುದ್ಧ ಕುಡಿಯುವ ನೀರಿಲ್ಲ. ಸ್ಯಾನಿಟರಿ ಪ್ಯಾಡ್ ಪೂರೈಸಿಲ್ಲ. ಈ ಬಗ್ಗೆ ನಿಲಯದ ಮೇಲ್ವಿಚಾರಕರನ್ನು ಪ್ರಶ್ನಿಸಿದರೆ ಬೆದರಿಸುತ್ತಾರೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ಹಾಸ್ಟೆಲ್‌ನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು ಎಂದು ನಿರ್ದೇಶಿಸಿದರು. ಹಾಸ್ಟೆಲ್‌ನಲ್ಲಿ ಆರೋಗ್ಯ ತಪಾಸಣೆ ಮಾಡಿಲ್ಲ. ನಿಲಯ ಮೇಲ್ವಿಚಾರಕರು ಕಾಟಾಚಾರದ ನಿರ್ವಹಣೆ ಮಾಡುತ್ತಿದ್ದಾರೆ. ವಸತಿ ನಿಲಯದ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ. ವಿದ್ಯಾರ್ಥಿಗಳು ಹೊಟ್ಟೆ ತುಂಬ ಊಟ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ಬೇಜವಾಬ್ದಾರಿ ನಡೆ ಬದಲಾಯಿಸಿಕೊಳ್ಳದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.