ADVERTISEMENT

ರೈತರ ಜಮೀನು ಕಬಳಿಕೆ ಆರೋಪ: ದಸಂಸ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 15:53 IST
Last Updated 24 ಜೂನ್ 2024, 15:53 IST
ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಡಳಿತಸೌಧದ ಎದುರು ಪ್ರತಿಭಟನೆ ನಡೆಯಿತು
ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಡಳಿತಸೌಧದ ಎದುರು ಪ್ರತಿಭಟನೆ ನಡೆಯಿತು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಆಶ್ರಿಹಾಲ್- ಜಾಣೆಹಾರ್ ಗ್ರಾಮದಲ್ಲಿರುವ ರೈತರ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ಮತ್ತು ದಸಂಸ ಮುಖಂಡರು ತಾಲ್ಲೂಕು ಆಡಳಿತ ಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ಅಧಿಕಾರ ಪ್ರದರ್ಶಿಸುತ್ತಿದ್ದಾರೆ. ರೈತರ ಜಮೀನುಗಳಲ್ಲಿದ್ದ ಮರ ಕಡಿದು, ಅದೇ ಮರಗಳನ್ನು ಕಂಬಗಳಂತೆ ಬಳಸಿ ಮದಲಿಂಗನ ಕಣಿವೆ ಸುತ್ತಮುತ್ತ ಇರುವ ಅರಣ್ಯಕ್ಕೆ ತಂತಿಬೇಲಿ ಹಾಕಿಕೊಳ್ಳುತ್ತಿರುವುದಾಗಿ ಬಿಂಬಿಸಿ, ರೈತರ ಜಮೀನುಗಳಿಗೆ ಯಂತ್ರ ನುಗ್ಗಿಸುತ್ತಿದ್ದಾರೆ. ಬಡ ದಲಿತ ರೈತರ ಮೇಲಿನ ದೌರ್ಜನ್ಯ ಅಕ್ಷಮ್ಯ ಎಂದು ದಸಂಸ ತಾಲ್ಲೂಕು ಸಂಚಾಲಕ ಆನಂದ್ ಹೇಳಿದರು.

ಈ ಹಿಂದೆ ಅಕೇಶಿಯಾ ಮರ ಕಡಿಯಲು ಟೆಂಡರ್ ಕೊಡಲಾಗಿತ್ತು. ಮರ ಕಡಿಯುವುದರ ಜತೆಗೆ ಅದರ ಬೊಡ್ಡೆಗಳನ್ನು ಕೀಳದೆ ಬಿಟ್ಟುಹೋಗಿದ್ದರು. ಅವು ಮತ್ತೆ ಚಿಗುರಿ ಮರಗಳಾಗಿವೆ. ಅವುಗಳನ್ನು ಕಡಿದುಕೊಂಡು ಹೋಗುವ ನೆಪದಲ್ಲಿ ರೈತರ ಜಮೀನಿಗೆ ಬಂದು ಅರಣ್ಯ ಅಧಿಕಾರಿಗಳು ರೈತರ ಜಮೀನಿಗೂ ತಂತಿಬೇಲಿ ಹಾಕಿ ಕಬಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ರೈತ ಮಂಜು ಹೇಳಿದರು.

ADVERTISEMENT

ಆಶ್ರಿಹಾಲ್-ಜಾಣೆಹಾರ್ ಭಾಗದ ನೂರಾರು ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ರೈತರ ಜಮೀನಿಗೆ ತೊಂದರೆ ಮಾಡಿಲ್ಲ: ರೈತ ಅಥವಾ ದಲಿತರ ಮೇಲೆ ದೌರ್ಜನ್ಯ ನಡೆಸುವ ಕುಕೃತ್ಯವನ್ನು ಅರಣ್ಯ ಇಲಾಖೆ ಯಾವುದೇ ಅಧಿಕಾರಿ ಎಸಗಿಲ್ಲ. ಅರಣ್ಯ ಸಂರಕ್ಷಣೆಗೆ ವಿರುದ್ಧವಾಗಿ ಕೆಲಸ ಮಾಡುವವರ ಬಗ್ಗೆ ಅಸಹನೆ ತೋರಿರಬಹುದು. ತಾಲ್ಲೂಕಿನ ಕಣಿವೆ ಸುತ್ತ ರಾತ್ರಿ ಮರ ಕಡಿಯುವ ಹಾಗೂ ನೆಲಉಳುವ ಬಗ್ಗೆ ಮಾಹಿತಿ ಇತ್ತು. ಮೇಲಧಿಕಾರಿಗಳ ಗಮನಕ್ಕೆ ತಂದಾಗ ಇಲಾಖೆ ಸುಪರ್ದಿಗೆ ಬರುವ ಅರಣ್ಯದ ಸುತ್ತ ಬೇಲಿ ಹಾಕುವಂತೆ ಸೂಚನೆ ನೀಡಿದ್ದಾರೆ. ರೈತರ ಜಮೀನಿಗೆ ಸಂಬಂಧಿಸಿದ ಜಾಗಕ್ಕೆ ಯಂತ್ರಗಳು ನುಗ್ಗಿಲ್ಲ ಎಂದು ಆರ್‌ಎಫ್‌ಒ ಅರುಣ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.