ADVERTISEMENT

ಗುಬ್ಬಿ: ಹದ ಮಳೆಗೆ ಹರ್ಷಗೊಂಡ ರೈತರು

​ಪ್ರಜಾವಾಣಿ ವಾರ್ತೆ
Published 12 ಮೇ 2024, 5:26 IST
Last Updated 12 ಮೇ 2024, 5:26 IST
ಗುಬ್ಬಿ ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಮಳೆಗೆ ತೋಟಗಳಲ್ಲಿ ನೀರು ನಿಂತಿತ್ತು
ಗುಬ್ಬಿ ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಮಳೆಗೆ ತೋಟಗಳಲ್ಲಿ ನೀರು ನಿಂತಿತ್ತು   

ಗುಬ್ಬಿ: ಭರಣಿ ಮಳೆಯ ಕೊನೆಯ ದಿನವಾದ ಶುಕ್ರವಾರ ತಾಲ್ಲೂಕಿನೆಲ್ಲೆಡೆ ಉತ್ತಮವಾದ ಮಳೆಯಾಗುವ ಮೂಲಕ ಜನರು ನಿಟ್ಟುಸಿರು ಬಿಡುವಂತಾಗಿದೆ.

ಮಳೆ ಇಲ್ಲದೆ ಬೇಸತ್ತಿದ್ದ ರೈತರಿಗೆ ರಾತ್ರಿ ಸುರಿದ ಮಳೆ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿದೆ. ಕಳೆದ ವಾರದಿಂದ ಜಿಲ್ಲೆಯ ಅನೇಕ ಕಡೆ ಮಳೆಯಾಗುತ್ತಿದ್ದರೂ, ತಾಲ್ಲೂಕಿನಲ್ಲಿ ಮಳೆಯಾಗಿರಲಿಲ್ಲ. ತೀವ್ರ ಬರದಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿತ್ತು.

ಹಲವೆಡೆ ದನ, ಕರುಗಳಿಗೆ ಕುಡಿಯಲು ಕೆರೆ-ಕಟ್ಟೆಗಳಲ್ಲಿ ಸ್ವಲ್ಪ ನೀರು ಬಂದಿದ್ದರೆ, ತೋಟಗಳಲ್ಲಿಯೂ ನೀರು ನಿಂತಿರುವುದು ರೈತರಿಗೆ ಸಮಾಧಾನ ತಂದಿದೆ. ಮಳೆ ಇಲ್ಲದೆ ಜಾನುವಾರಗಳ ಮೇವು, ತೆಂಗು, ಅಡಿಕೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದ ರೈತರು ಈಗ ಕೊಂಚ ನಿರಾಳರಾಗಿದ್ದಾರೆ.

ADVERTISEMENT

ಮಳೆಬಿದ್ದ ರಭಸದಿಂದಾಗಿ ಬೆಣಚಿಗೆರೆ ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳು ಮುರಿದು ಬಿದ್ದಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಬೆಸ್ಕಾಂ ತಕ್ಷಣ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿಟ್ಟೂರು-ಸಂಪಿಗೆ ರಸ್ತೆಯಲ್ಲಿ ಮರ ಬಡಸಮೇತ ಮುರಿದು ಬಿದ್ದು ಸ್ವಲ್ಪಕಾಲ ಸಂಚಾರಕ್ಕೆ ತೊಂದರೆಯಾಗಿತ್ತು.

‘ಮಳೆ ಇಲ್ಲದೆ ಹತಾಶರಾಗಿದ್ದ ನಮಗೆ ಕಳೆದ ರಾತ್ರಿ ಸುರಿದಿರುವ ಹದಮಳೆ ನೆಮ್ಮದಿ ತಂದಿದೆ’ ಎಂದು ರೈತ ಶೇಖರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.