ADVERTISEMENT

ಕೊಡಿಗೇನಹಳ್ಳಿ | ಹತ್ತಿ ಬೆಳೆ ಮೊರೆ ಹೋದ ರೈತರು; 400 ಎಕರೆಯಲ್ಲಿ ಕೃಷಿ

ಗಂಗಾಧರ್ ವಿ ರೆಡ್ಡಿಹಳ್ಳಿ
Published 5 ಜುಲೈ 2024, 6:14 IST
Last Updated 5 ಜುಲೈ 2024, 6:14 IST
<div class="paragraphs"><p>ಐಡಿಹಳ್ಳಿ ಹೋಬಳಿಯ ಯರಗುಂಟೆ ಗ್ರಾಮದ ಶಿವಶಂಕರ್ ಎಂಬುವವರ ಹತ್ತಿ ತೋಟದಲ್ಲಿ ರೈತ ಮಹಿಳೆಯರು ಹೂವನ್ನು ಕ್ರಾಸ್ ಮಾಡುತ್ತಿರುವುದರಲ್ಲಿ ತೊಡಗಿರುವುದು.</p></div>

ಐಡಿಹಳ್ಳಿ ಹೋಬಳಿಯ ಯರಗುಂಟೆ ಗ್ರಾಮದ ಶಿವಶಂಕರ್ ಎಂಬುವವರ ಹತ್ತಿ ತೋಟದಲ್ಲಿ ರೈತ ಮಹಿಳೆಯರು ಹೂವನ್ನು ಕ್ರಾಸ್ ಮಾಡುತ್ತಿರುವುದರಲ್ಲಿ ತೊಡಗಿರುವುದು.

   

ಕೊಡಿಗೇನಹಳ್ಳಿ: ಮಳೆಯನ್ನೇ ನಂಬಿ ಬದುಕುತ್ತಿರುವ ಬಯಲುಸೀಮೆಯ ಬಹುತೇಕ ರೈತರು ಶೇಂಗಾ, ರಾಗಿ, ಮೆಕ್ಕೆಜೋಳದ ಜೊತೆಗೆ ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಬೇರೇನು ಬೆಳೆಗೆ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಇಂದು ಅವುಗಳೆಲ್ಲವನ್ನು ಬದಿಗೊತ್ತಿ ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯತ್ತ ಮುಖ ಮಾಡಿ ಆರ್ಥಿಕ ಲಾಭಗಳಿಸುತ್ತಿರುವುದು ಇತರೆ ರೈತರನ್ನು ಆಕರ್ಷಿಸುವಂತೆ ಮಾಡಿದೆ.

ಇಂತಹದೊಂದು ನೂತನ ಪ್ರಯೋಗಗಳನ್ನು ನಾವು ಕಾಣಬಹುದಾಗಿರುವುದು ಬೇರಲ್ಲೂ ಅಲ್ಲ ಅದು ನಮ್ಮ ಬಯಲುಸೀಮೆಯ ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಹಾಗೂ ಪುರವರ ಹೋಬಳಿಯ ಆಯ್ದ ಕೆಲವು ಪ್ರದೇಶಗಳಲ್ಲಿ ಮಾತ್ರ. ಹಿಂದೆ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವಂತೆ ರೈತರು ಹಳೆ ಪದ್ದತಿಯನ್ನೆ ಮುಂದುವರಿಸಿ ಕೃಷಿಯಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದರು. ಆದರೆ ಇಂದು ಕೃಷಿಯಲ್ಲಿ ಲಾಭಗಳಿಸುವ ಬೆಳೆಗಳನ್ನು ನೆಚ್ಚಿ ಬದುಕನ್ನು ಹಸನನ್ನಾಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ರೈತ ಇಂತಹ ನೂತನ ಬೆಳೆಗಳತ್ತ ಮುಖ ಮಾಡಿರುವುದರ ಜೊತೆಗೆ ಆರ್ಥಿಕವಾಗಿ ಚೇತರಿಕೆ ಕಾಣುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎನ್ನುತ್ತಾರೆ ಇಲ್ಲಿನ ರೈತರು.

ADVERTISEMENT

ಹತ್ತಿ ಬೆಳೆ ಎಂಬುದೇ ತಿಳಿಯದ ಈ ಭಾಗದ ಜನರಿಗೆ ಸುಮಾರು 12 ವರ್ಷಗಳ ಹಿಂದೆ ಹೊಸಕೆರೆ ಬಳಿಯಿರುವ ರಾಶಿ ಕಂಪನಿಯವರು ಹತ್ತಿ ಬೆಳೆಯನ್ನು ಪರಿಷಯಿಸಿದರು. ಕಂಪನಿಯಿಂದ ಬೀಜ, ಔಷಧಿ, ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಎಕರೆಗೆ 50 ಸಾವಿರವರೆಗೆ ಬಡ್ಡಿರಹಿತ ಸಾಲವನ್ನು ನೀಡುವುದರಿಂದ ಕೃಷಿಯಿಂದ ಹತಾಶರಾಗಿದ್ದ ಹಲವು ರೈತರು ಹತ್ತಿ ಬೆಳೆಯಲು ಮುಂದಾದರು. ಹಾಗಾಗಿ ಇಂದು ಯರಗುಂಟೆ, ಹೂವಿನಹಳ್ಳಿ,ಬಂಡೇನಹಳ್ಳಿ, ಗರಣಿ,ಬ್ರಹ್ಮಸಮುದ್ರ,ಮಾರುತಿಪುರ, ಶೋಬೇನಹಳ್ಳಿ, ತಿಪ್ಪಗಾನಹಳ್ಳಿ, ನೀಲಿಹಳ್ಳಿ, ಸಾದರಹಳ್ಳಿ, ಮುದ್ದೇನಹಳ್ಳಿ, ಗೂಲಹಳ್ಳಿ, ದಾದಗೊಂಡನಹಳ್ಳಿ, ಪುರವರ ಹೋಬಳಿಯ ಗಿರೇಗೌಡನಹಳ್ಳಿ ಸುತ್ತಮುತ್ತ ಈ ಬೆಳೆಯನ್ನು ಕಾಣಬಹುದು. ಜೊತೆಗೆ ವಿಶೇಷವಾಗಿ ಐಡಿಹಳ್ಳಿ ಹೋಬಳಿಯ ಯರಗುಂಟೆ, ಹೂವಿನಹಳ್ಳಿ ಸುತ್ತಮುತ್ತ ಸುಮಾರು 400 ಎಕರೆ ಪ್ರದೇಶದಲ್ಲಿ ಇಂದು ಹತ್ತಿ ಬೆಳೆ ಕಾಣಬಹುದು ಎನ್ನುತ್ತಾರೆ ಯರಗುಂಟೆ ರೈತ ಪ್ರಕಾಶ್.

ಜಮೀನು ಹಸನುಗೊಳಿಸಿ ಬಿತ್ತನೆಗೆ ತಯಾರಿ ಮಾಡಿಕೊಂಡ ನಂತರ ಹೊಸಕೆರೆ ಬಳಿಯಿರುವ ರಾಶಿ ಕಂಪನಿಯಿಂದ ರೈತರಿಗೆ ನೇರವಾಗಿ ಬೀಜ ನೀಡುವುದರಿಂದ ಹಿಡಿದು ಬೆಳೆ ಕಟಾವುವರೆಗೆ ನಿಗಾವಹಿಸಿ ಬೆಳೆದ ಬೀಜ ಮತ್ತು ಹತ್ತಿಯನ್ನು ಖರೀದಿಸುವುದರಿಂದ ರೈತರು ನಿರಾಯಸವಾಗಿ 1ಎಕರೆಗೆ 6 ರಿಂದ 7 ಕಿಂಟಲ್ ವರೆಗೆ ಇಳುವರಿ ತೆಗೆಯುವುದರ ಜೊತೆಗೆ ಒಂದು ಕಿಂಟಲ್ ಬೀಜಕ್ಕೆ 50 ಸಾವಿರ ಹಾಗೂ 1 ಕಿಂಟಲ್ ಹತ್ತಿಗೆ 15 ಸಾವಿರದಷ್ಟು ಹಣ ಕೂಡ ಸಿಗುತ್ತದೆ. ಹಾಗಾಗಿ ಈ ಬೆಳೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿರುವುದರ ಜೊತೆಗೆ ಮತ್ತಷ್ಟು ರೈತರು ಬೆಳೆಯಲು ಮುಂದಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎನ್ನುತ್ತಾರೆ ಈ ಭಾಗದ ರೈತರು.

ಹಳೆ ಕೃಷಿ ಪದ್ದತಿಯಿಂದ ನಷ್ಟದ ಜೊತೆಗೆ ಕೃಷಿ ಬಗೆಗಿನ ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತಿದ್ದ ನನಗೆ ಹತ್ತಿ ಬೇಸಾಯ ಇಂದು ನನಗೆ ಆರ್ಥಿಕವಾಗಿ ಕೈಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ. ಇದರ ಪರಿಣಾಮ ಇಂದು ನಮ್ಮ 3 ಎಕರೆ ಜಮೀನುನಲ್ಲಿ ಸುಮಾರು 10 ವರ್ಷಗಳಿಂದ ನಿರಂತರವಾಗಿ ಹತ್ತಿ ಬೆಳೆಯುತ್ತಿದ್ದೇನೆ, ಕಂಪನಿ ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಳೆಗೆ ಸಕಾಲಕ್ಕೆ ನೆರವು ನೀಡುವುದರಿಂದ ನಮಗೆ ಯಾವುದೇ ಸಮಸ್ಯೆಯಿಲ್ಲದೆ ನೆರವಾಗಿದೆ.
-ಶಿವಶಂಕರ್, ರೈತ ಯರಗುಂಟೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ಬಹುತೇಕ ರೈತರು ಇತರೆ ಬೆಳೆಗಳಿಗಿಂತ ಹತ್ತಿ ಬೆಳೆಯಲು ಮುಂದಾಗುತ್ತಿದ್ದು, ಬೇರೆ ಬೆಳೆಗಳಿಗೆ ಹೋಲಿಸಿದರೆ ಹತ್ತಿ ಬೆಳೆ ಈ ಭಾಗಕ್ಕೆ ಮತ್ತು ರೈತರ ಜೀವನ ಸುಧಾರಣಗೆ ಹೆಚ್ಚು ಸೂಕ್ತ.
-ಎಂ. ದೇವದಾಸ್ ರೈತ ದಾಸಪ್ಪನಪಾಳ್ಯ.
ನಮ್ಮ ಭಾಗದಲ್ಲಿ ಕೇವಲ ಹಳೆ ಕೃಷಿ ಪದ್ದತಿ ನಂಬಿ ನಷ್ಟ ಅನುಭವಿಸುತ್ತಿದ್ದೆ. ಈಗ ಅಲ್ಲಿನ ಬೆಳೆಯನ್ನು ನೋಡಿ ಮಾಹಿತಿ ಪಡೆದ ಮೇಲೆ ನಾನು ಸಹ ಮುಂದಿನ ದಿನಗಳಲ್ಲಿ ಹತ್ತಿ ಬೆಳೆಯಬೇಕೆಂದು ನಿರ್ಧರಿಸಿದ್ದೇನೆ.
-ಮೋಹನ್ ಕುಮಾರ್, ರೈತ ವೀರನಾಗೇನಹಳ್ಳಿ ಪುರವರ ಹೋಬಳಿ.

ಹತ್ತಿ ಗಿಡದಲ್ಲಿನ ಹೂವು-ಕಾಯಿ ಬಿಟ್ಟಿರುವ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.