ADVERTISEMENT

ತುಮಕೂರು | ಮಿಲ್ಲಿಂಗ್ ಕೊಬ್ಬರಿ: ಜಿಲ್ಲೆಗೆ ಸಿಗದ ಅವಕಾಶ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 5:19 IST
Last Updated 6 ಜುಲೈ 2024, 5:19 IST
ಕೊಬ್ಬರಿ
ಕೊಬ್ಬರಿ   

ತುಮಕೂರು: ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಕೊಬ್ಬರಿ ಬೆಳೆಯುತ್ತಿದ್ದರೂ ಬೆಂಬಲ ಬೆಲೆಯಲ್ಲಿ ಮಿಲ್ಲಿಂಗ್ ಕೊಬ್ಬರಿ ಖರೀದಿಗೆ ಅವಕಾಶ ನೀಡದಿರುವುದಕ್ಕೆ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯಲ್ಲೂ ಖರೀದಿಸಬೇಕು ಎಂದು ತೆಂಗು ಬೆಳೆಗಾರರು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರವು ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಮಿಲ್ಲಿಂಗ್ ಕೊಬ್ಬರಿ (ಚೂರು ಕೊಬ್ಬರಿ) ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಮಿಲ್ಲಿಂಗ್ ಕೊಬ್ಬರಿ ಖರೀದಿಗೆ ಆದೇಶಿಸಲಾಗಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯುವ ಜಿಲ್ಲೆಯನ್ನೇ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂಬ ಆಕ್ರೋಶ ರೈತರಿಂದ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಸುಮಾರು 2.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ತುಮಕೂರಿನ ನಂತರದ ಸ್ಥಾನದಲ್ಲಿ ಹಾಸನ ಜಿಲ್ಲೆ ಬರುತ್ತದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಕೊಬ್ಬರಿ ಉತ್ಪಾದನೆ ಕಡಿಮೆ ಇರುತ್ತದೆ. ಹೆಚ್ಚು ಬೆಳೆಯುವ ಜಿಲ್ಲೆಯನ್ನೇ ಕೈ ಬಿಟ್ಟು ಅನ್ಯಾಯ ಮಾಡಲಾಗಿದೆ. ಬೇರೆ ಜಿಲ್ಲೆಯಲ್ಲೂ ಖರೀದಿಸಲಿ. ಅದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಜಿಲ್ಲೆಯಲ್ಲೂ ಅವಕಾಶ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಮಿಲ್ಲಿಂಗ್ ಕೊಬ್ಬರಿ ಕ್ವಿಂಟಲ್‌ಗೆ ₹11,160 ನಿಗದಿಪಡಿಸಿದೆ. ರಾಜ್ಯ ಸರ್ಕಾರ ಉಂಡೆ ಕೊಬ್ಬರಿ ಕ್ವಿಂಟಲ್‌ಗೆ ₹1,500 ಪ್ರೋತ್ಸಾಹ ಧನ ನೀಡಿತ್ತು. ಮಿಲ್ಲಿಂಗ್ ಕೊಬ್ಬರಿಗೂ ಇಷ್ಟೇ ಪ್ರಮಾಣದಲ್ಲಿ ಪ್ರೋತ್ಸಾಹ ಧನ ಮುಂದುವರಿಸಿದೆ. ಕೇಂದ್ರದ ಬೆಂಬಲ ಬೆಲೆ ಹಾಗೂ ರಾಜ್ಯದ ಪ್ರೋತ್ಸಾಹ ಧನ ಸೇರಿ ಕ್ವಿಂಟಲ್‌ಗೆ ಒಟ್ಟು ₹12,660 ಬೆಲೆ ನಿಗದಿಪಡಿಸಲಾಗಿದೆ.

ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್)ವನ್ನು ಖರೀದಿ ಏಜೆನ್ಸಿಯಾಗಿ ನೇಮಿಸಿದೆ. ರೈತರ ಹೆಸರು ನೋಂದಣಿಗೆ 45 ದಿನಗಳ ಕಾಲಾವಕಾಶ ನೀಡಿದ್ದು, 90 ದಿನಗಳಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಪ್ರತಿ ಎಕರೆಗೆ 2 ಕ್ವಿಂಟಲ್, ಒಬ್ಬ ರೈತರಿಂದ ಗರಿಷ್ಠ 10 ಕ್ವಿಂಟಲ್ ಖರೀದಿ ಮಾಡುವಂತೆ ಆದೇಶಿಸಲಾಗಿದೆ.

ಉಂಡೆ ಕೊಬ್ಬರಿ ಖರೀದಿ ಸಮಯದಲ್ಲೂ ಸಾಕಷ್ಟು ಗೊಂದಲಗಳಾಗಿದ್ದು, ಜಿಲ್ಲೆಗೆ ಖರೀದಿ ಪ್ರಮಾಣವನ್ನು ತಗ್ಗಿಸಲಾಗಿತ್ತು. ಆ ಸಮಯದಲ್ಲೂ ರೈತರಿಗೆ ಅನ್ಯಾಯವಾಗಿದ್ದು, ಈಗಲೂ ಸರ್ಕಾರ ಅನ್ಯಾಯ ಮಾಡಿದೆ. ಜಿಲ್ಲೆಯಲ್ಲೂ ಖರೀದಿಗೆ ಅವಕಾಶ ನೀಡಬೇಕು. ಹೋರಾಟಕ್ಕೆ ಅವಕಾಶ ನೀಡಬಾರದು ಎಂದು ರೈತರು ಮನವಿ ಮಾಡುತ್ತಿದ್ದಾರೆ.

ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಗೆ ಅನ್ಯಾಯ ರೈತರ ಹಿತ ಕಾಯದ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯಲ್ಲೂ ಖರೀದಿಗೆ ಆದೇಶಿಸಲು ಒತ್ತಾಯ
ಅವಕಾಶಕ್ಕೆ ಒತ್ತಾಯ
ತಿಪಟೂರು: ಜಿಲ್ಲೆಯಲ್ಲೂ ಮಿಲ್ಲಿಂಗ್ ಕೊಬ್ಬರಿ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ರೈತಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸದೃಢ ಪೌಂಡೇಶನ್ ಅಧ್ಯಕ್ಷ ಬಿ.ಜಿ.ಭೋಜರಾಜ ಒತ್ತಾಯಿಸಿದ್ದಾರೆ. ಈ ಸಂಬಂಧ ಜಿಲ್ಲೆಯ ಶಾಸಕರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯಲ್ಲೂ ಮಿಲ್ಲಿಂಗ್ ಕೊಬ್ಬರಿ ಖರೀದಿಗೆ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. ಏಷ್ಯಾದಲ್ಲೇ ಅತಿ ಹೆಚ್ಚು ಕೊಬ್ಬರಿ ಉತ್ಪಾದಿಸುವ ಪ್ರದೇಶವಾಗಿದ್ದು ಇಂತಹ ಜಿಲ್ಲೆಗೆ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಮಿಲ್ಲಿಂಗ್ ಕೊಬ್ಬರಿ ಖರೀದಿಸಲು ಅವಕಾಶ ನೀಡಿಲ್ಲ. ಇದರಿಂದ ಜಿಲ್ಲೆಯ ರೈತರಿಗೆ ತುಂಬಾ ಅನ್ಯಾಯವಾದಂತಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.