ADVERTISEMENT

ಫಸಲ್ ಬಿಮಾ: ನೋಂದಣಿಗೆ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 6:09 IST
Last Updated 2 ಜೂನ್ 2024, 6:09 IST

ತುಮಕೂರು: ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಪ್ರಾರಂಭವಾಗಿದ್ದು, ರೈತರು ವಿಮಾ ಕಂತಿನ ಹಣ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಭತ್ತದ ವಿಮೆ ಕಂತು ಪ್ರತಿ ಎಕರೆಗೆ ₹754, ಶೇಂಗಾ ₹441, ರಾಗಿ ₹344 ಆಗಸ್ಟ್ 16ರ ಒಳಗೆ, ಶೇಂಗಾ (ನೀರಾವರಿ) ₹532, ತೊಗರಿ ₹388 ಹಣವನ್ನು ಜುಲೈ 15, ಮುಸುಕಿನ ಜೋಳ (ನೀರಾವರಿ) ₹522, ಮುಸುಕಿನ ಜೋಳ (ಮಳೆ ಆಶ್ರಿತ) ₹457 ವಿಮಾ ಕಂತನ್ನು ಜುಲೈ 31ರ ಒಳಗೆ ಪಾವತಿಸಬೇಕು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಫಸಲ್ ಬಿಮಾ ಯೋಜನೆ ಅನುಷ್ಠಾನ ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ರಮೇಶ್‌ ಮಾಹಿತಿ ನೀಡಿದರು.

ADVERTISEMENT

ಜಿ.ಪಂ ಸಿಇಒ ಜಿ.ಪ್ರಭು, ‘ಫಸಲ್ ಬಿಮಾ ಯೋಜನೆ ನೋಂದಣಿ ವಿಷಯದಲ್ಲಿ ಬ್ಯಾಂಕ್‍ ಅಧಿಕಾರಿಗಳು ನಿರ್ಲಕ್ಷ ತೋರಬಾರದು. ಬ್ಯಾಂಕ್‌ ಗ್ರಾಹಕರಲ್ಲದ ರೈತರಿಗೂ ನೋಂದಣಿ ಮಾಡಿಕೊಡಬೇಕು. ನೋಂದಣಿ ಮಾಡಿಸದ ಅಧಿಕಾರಿಗಳಿಗೆ ನೋಟಿಸ್ ಕೊಡಲಾಗುವುದು. ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಸರ್ಕಾರ ಸೂಚಿಸಿರುವ ಶುಲ್ಕ ಹೊರತುಪಡಿಸಿ ಯಾವುದೇ ರೀತಿಯ ಸೇವಾ ಶುಲ್ಕ ಪಡೆಯಬಾರದು’ ಎಂದು ನಿರ್ದೇಶಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ‘ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕೆ ಓರಿಯಂಟಲ್ ಜನರಲ್‌ ಇನ್ಸೂರೆನ್ಸ್‌ ಕಂಪನಿಯನ್ನು ನಿಗದಿ ಪಡಿಸಲಾಗಿದೆ. ರೈತರು ಸಾರ್ವಜನಿಕ ಸೇವಾ ಕೇಂದ್ರ, ಬ್ಯಾಂಕ್‌ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಮಾಡಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ವಿ.ಕರಾಳೆ, ಕೃಷಿ ಇಲಾಖೆ ಉಪ ನಿರ್ದೇಶಕ ಅಶೋಕ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.