ಪಾವಗಡ: ತಾಲ್ಲೂಕಿನಾದ್ಯಂತ ಕೆಲ ದಿನಗಳು ಬಿಡುವು ನೀಡಿದ್ದ ಮಳೆ ಮತ್ತೆ ಭಾನುವಾರ ರಾತ್ರಿ ಆರಂಭವಾಗಿದೆ. ಶೇಂಗಾ ಸೇರಿದಂತೆ ವಿವಿಧ ಬೆಳೆಗಳಲ್ಲಿ ನೀರು ನಿಂತು ಕೊಳೆಯುವ ಹಂತ ತಲುಪಿವೆ.
ತಾಲ್ಲೂಕಿನ ಕೆ.ಟಿ. ಹಳ್ಳಿ ಬಳಿಯ ಸಿದ್ದಪ್ಪನಗುಡಿ ಬಳಿ ಕೆರೆ ತುಂಬಿ ಸತತ 20 ದಿನಗಳಿಂದ ಕೆರೆ ನೀರು ಜಮೀನುಗಳಿಗೆ ಹರಿಯುತ್ತಿದೆ. ಸುಮಾರು 30 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶೇಂಗಾ ನೀರಿನಲ್ಲಿ ಕೊಳೆಯುವ ಹಂತ ತಲುಪಿದೆ.
ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಇದೀಗ ಸತತ ಮಳೆಯಿಂದ ಕಂಗಾಲಾಗಿದ್ದಾರೆ. ಕೆರೆ ನೀರು ಜಮೀನುಗಳಲ್ಲಿ ನಿಂತಿರುವುದರಿಂದ ಜಾನುವಾರುಗಳಿಗೆ ಮೇವು ಇಲ್ಲದಾಗಿದೆ. ಹೊಲಗಳಲ್ಲಿ ಕಾಲಿಡಲು ಸಾಧ್ಯವಾಗುತ್ತಿಲ್ಲ ಎಂದು ರೈತ ಹನುಮಂತರಾಯಪ್ಪ ಸಮಸ್ಯೆ ಬಗ್ಗೆ ವಿವರಿಸಿದರು.
ಕೆರೆ ನೀರು ಜಮೀನುಗಳಿಗೆ ಬರದಂತೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕು. ಈಗಾಗಲೇ, ಹಾನಿಯಾಗಿರುವ ಬೆಳೆಗೆ ಪರಿಹಾರ ನೀಡಿ ರೈತರಿಗೆ ಆಸರೆಯಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.