ಶಿರಾ: ನಗರದ 12ನೇ ವಾರ್ಡ್‌ನ ಶಿರಾಣಿ ಮೊಹಲ್ಲಾದಲ್ಲಿ ಶನಿವಾರ ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕು ಮಕ್ಕಳು ಸೇರಿದಂತೆ ಐದು ಮಂದಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದೆ.
ಮಕ್ಕಳು ಮನೆ ಮುಂದೆ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ಜಗಳವಾಡಿಕೊಂಡು ಬಂದು ಮಕ್ಕಳ ಮೇಲೆ ದಾಳಿ ಮಾಡಿವೆ. ರಿಹಾನ್ (7), ತಾಸ್ಮಿಯ (13), ಜಿಯಾ ಉಲ್ಲಾಖಾನ್ (7), ಇಬದುಲ್ಲಾ ಖಾನ್ (1 ವರ್ಷ 3 ತಿಂಗಳು) ಗಾಯಗೊಂಡಿದ್ದಾರೆ. ನಾಯಿಗಳಿಂದ ಮಕ್ಕಳನ್ನು ಬಿಡಿಸಲು ಹೋದ ಶಾಹಿನ (45) ಸಹ ಗಾಯಗೊಂಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ರಿಹಾನ್ ಮತ್ತು ಇಬದುಲ್ಲಾ ಖಾನ್ ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿರಾಣಿ ಮೊಹಲ್ಲಾದಲ್ಲಿ ಮಕ್ಕಳಿಗೆ ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ಸ್ಥಳೀಯರು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತ ರುದ್ರೇಶ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ ರುದ್ರೇಶ್, ಜನವರಿಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿಗಳನ್ನು ನಿಯಂತ್ರಣಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಟೆಂಡರ್ ಕರೆದು ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.