ADVERTISEMENT

20 ವರ್ಷಗಳಿಂದ ವಾನರ ಸೈನ್ಯಕ್ಕೆ ಆಹಾರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:32 IST
Last Updated 28 ಮಾರ್ಚ್ 2021, 4:32 IST
ಮಧುಗಿರಿ ತಾಲ್ಲೂಕು ಕೋಡಗದಾಲ ಶಾಲೆಯ ಗೇಟ್ ಮುಂಭಾಗ ವಾನರ ಸೈನ್ಯಕ್ಕೆ ಆಹಾರ ನೀಡುವುದರಲ್ಲಿ ನಿರತ ರುಕ್ಮಿಣಮ್ಮ
ಮಧುಗಿರಿ ತಾಲ್ಲೂಕು ಕೋಡಗದಾಲ ಶಾಲೆಯ ಗೇಟ್ ಮುಂಭಾಗ ವಾನರ ಸೈನ್ಯಕ್ಕೆ ಆಹಾರ ನೀಡುವುದರಲ್ಲಿ ನಿರತ ರುಕ್ಮಿಣಮ್ಮ   

ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕಿನ ಕೋಡಗದಾಲ ಗ್ರಾಮ ಪಂಚಾಯಿತಿಯ ನಾಗಮ್ಮ ಪಾಳ್ಯದ ನಿವಾಸಿ ರುಕ್ಮಿಣಮ್ಮ 72ರ ವಯಸ್ಸಿನಲ್ಲೂ ವಾನರ ಸೈನ್ಯಕ್ಕೆ ಮತ್ತು ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.

ನಿತ್ಯ ಸಂಜೆ 5ಗಂಟೆಗೆ ಕೋಡಗದಾಲದ ಪ್ರಾಥಮಿಕ ಶಾಲೆಯ ಗೇಟಿನ ಮುಂದೆ ಬ್ಯಾಗ್‌ ತುಂಬಾ ತಿನಿಸು, ಹಣ್ಣು ಹೊತ್ತು ಹಾಜರಾಗುತ್ತಾರೆ. ಇವರು ಬರುವುದನ್ನೇ ಕಾಯುತ್ತಿರುವ ವಾನರ ಸೈನ್ಯ ಮತ್ತು ಬೀದಿ ನಾಯಿಗಳು ಪ್ರೀತಿಯಿಂದ ಇವರನ್ನು ಸುತ್ತುವರೆಯುತ್ತವೆ. ವಿವಿಧ ಬಗೆಯ ಹಣ್ಣು, ಬಿಸ್ಕತ್, ಬ್ರೆಡ್ ತೆಗೆಯುವ ರುಕ್ಮಿಣಮ್ಮ ಪ್ರಾಣಿಗಳಿಗೆ ನೀಡಿ ಉಪಚರಿಸುತ್ತಾರೆ.

ವಾರಕ್ಕೆ ಮೂರು ಬಾರಿ ಆಟೊದಲ್ಲಿ ಪೇಟೆಗೆ ಬರುವ ಇವರು ತಮ್ಮ ಸ್ವಂತ ಖರ್ಚಿನಲ್ಲಿ ಆಯಾ ಋತುವಿನಲ್ಲಿ ಸಿಗುವ ಹಣ್ಣು, ತಿನಿಸುಗಳನ್ನು ತಂದು ವಾನರ ಸೈನ್ಯಕ್ಕೆ ಹಂಚುತ್ತಾರೆ. ಈ ಕಾಯಕಕ್ಕೆ ಕೋಡಗದಾಲದ ಆಟೊ ಚಾಲಕರು ಸಹಕಾರ ನೀಡುತ್ತಿದ್ದಾರೆ.

ADVERTISEMENT

‘ಮೊದ ಮೊದಲು ಮನೆಯ ಹತ್ತಿರ ಬರುತ್ತಿದ್ದ ವಾನರ ಸೈನ್ಯಕ್ಕೆ ಆಹಾರ ನೀಡುತ್ತಿದ್ದೆ. ಅದೇ ಅಭ್ಯಾಸ ಮಾಡಿಕೊಂಡ ಕೋತಿಗಳು ಮನೆಯ ಸಮೀಪ ರಸ್ತೆ ದಾಟಿ ಬರುವಾಗ ವಾಹನಗಳಿಗೆ ಸಿಲುಕಿ ಮೃತಪಟ್ಟವು. ಇದರಿಂದ ವೇದನೆಯಾಯಿತು. ಅಂದಿನಿಂದ ನಿತ್ಯ ಸಂಜೆ ಶಾಲೆಯ ಗೇಟ್ ಬಳಿ ಬಂದು ಕೂರುತ್ತೇನೆ. ಅವುಗಳೂ ಸಮಯಕ್ಕೆ ಸರಿಯಾಗಿ ಬರುತ್ತವೆ. ನನಗೆ ಬರುವ ಪಿಂಚಣಿ ಹಣವನ್ನು ಇದಕ್ಕೆ ಉಪಯೋಗಿಸುತ್ತಿದ್ದು, ಇದರಲ್ಲೇ ಸಂತಸ ಕಂಡಿದ್ದೇನೆ. ಮೂವರು ಮಕ್ಕಳು ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ’ ಎನ್ನುತ್ತಾರೆ ರುಕ್ಮಿಣಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.