ADVERTISEMENT

‘ರಾಷ್ಟ್ರೀಯ ವಿಪತ್ತು’ ಘೋಷಣೆಗೆ ಆಗ್ರಹ

ನರೇಗಾ ಮಾನವ ದಿನಗಳ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 5:16 IST
Last Updated 9 ಮಾರ್ಚ್ 2024, 5:16 IST

ತುಮಕೂರು: ರಾಜ್ಯದಲ್ಲಿ ಎದುರಾಗಿರುವ ಭೀಕರ ಬರವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು. ನರೇಗಾ ಯೋಜನೆಯಲ್ಲಿ 200 ದಿನ ಕೆಲಸ ನೀಡಬೇಕು. ಹೆಚ್ಚುವರಿ ಪಡಿತರ ಧಾನ್ಯ ಒದಗಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಒತ್ತಾಯಿಸಿದರು.

ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಮಾಮೂಲಿಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ಜಾನುವಾರುಗಳಿಗೆ ಮೇವು, ನೀರಿನ ಅಭಾವ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಕೂಡಲೇ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಆಗ್ರಹಿಸಿದರು.

ಯಾವುದೇ ರೈತರನ್ನು ವಾಪಸ್‌ ಕಳುಹಿಸದೆ ಕೊಬ್ಬರಿ ಖರೀದಿಗೆ ನೋಂದಣಿ ಮಾಡಿಕೊಳ್ಳಬೇಕು. ರೈತರ ಬೇಡಿಕೆಗಳಿಗೆ ಅನುಗುಣವಾಗಿ ಕೊಬ್ಬರಿ ಮಿತಿ ಹೆಚ್ಚಿಸಬೇಕು. ಬೇಡಿಕೆ ಈಡೇರಿಕೆಗಾಗಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದಾಳಿ ನಡೆಸುತ್ತಿರುವುದನ್ನು ಖಂಡಿಸಿದರು.

ADVERTISEMENT

ರೈತರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಐತಿಹಾಸಿಕ ಚಳವಳಿ ಸಮಯದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 14ರಂದು ನವದೆಹಲಿಯಲ್ಲಿ ಕಿಸಾನ್‌ ಮಜ್ದೂರ್ ಮಹಾ ಪಂಚಾಯತ್ ನಡೆಯಲಿದೆ. ರಾಜ್ಯದ ರೈತರು ಸಹ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಉಮೇಶ್‌, ಜಿಲ್ಲಾ ಸಹ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.