ADVERTISEMENT

ತುಮಕೂರು: ಸೋರುವ ಠಾಣೆಗೆ ಕೊನೆಗೂ ಮುಕ್ತಿ

ಸೋರುತ್ತಿದೆ ಜಯನಗರ ಠಾಣೆ, ಇಂದು ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:04 IST
Last Updated 9 ಜುಲೈ 2024, 16:04 IST
ತುಮಕೂರಿನ ಜಯನಗರ ಪೊಲೀಸ್‌ ಠಾಣೆ
ತುಮಕೂರಿನ ಜಯನಗರ ಪೊಲೀಸ್‌ ಠಾಣೆ   

ತುಮಕೂರು: ಹಲವು ವರ್ಷಗಳಿಂದ ಸೋರುವ ಕೊಠಡಿಗಳಲ್ಲಿ ಕೆಲಸ ಮಾಡುತ್ತಿದ್ದ ಜಯನಗರ ಠಾಣೆ ಪೊಲೀಸರಿಗೆ ಕೊನೆಗೂ ‘ಬಿಡುಗಡೆ ಭಾಗ್ಯ’ ಸಿಗಲಿದೆ. ಬುಧವಾರ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದೆ.

ಶಿಥಿಲಾವಸ್ಥೆಗೆ ತಲುಪಿದ್ದ ಕಟ್ಟಡದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು. ಕಡತಗಳು ನೆನೆಯದಂತೆ ರಕ್ಷಿಸಿ, ಕಾಪಾಡಿಕೊಳ್ಳುವುದು ಸವಾಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಿದ್ದರೂ ಸರ್ಕಾರದಿಂದ ಹಣ ಬಿಡುಗಡೆಯಾಗಿರಲಿಲ್ಲ. ಅನುದಾನಕ್ಕಾಗಿ ಜಯನಗರ ನಿವಾಸಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪವಾಸ ಸತ್ಯಾಗ್ರಹ, ಪ್ರತಿಭಟನೆ ನಡೆಸಿದ್ದರು. ಇದೀಗ ಕಟ್ಟಡ ನಿರ್ಮಾಣಕ್ಕೆ ಪೊಲೀಸ್‌ ಇಲಾಖೆ ಮುಂದಾಗಿದೆ.

ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ಠಾಣೆ ಆರಂಭಿಸಲಾಗಿತ್ತು. 2015ರಲ್ಲಿ ಜಯನಗರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಠಾಣೆ ಕಾರ್ಯಾರಂಭ ಮಾಡಿತ್ತು. ಆಗ ಸಹ ಜಿ.ಪರಮೇಶ್ವರ ಅವರೇ ಗೃಹ ಮಂತ್ರಿಯಾಗಿದ್ದರು. ಅವರೇ ಮುಂದೆ ನಿಂತು ಠಾಣೆಗೆ ಚಾಲನೆ ನೀಡಿದ್ದರು. ಉದ್ಘಾಟನೆ ಬಿಟ್ಟರೆ ಬೇರೆ ಯಾವುದೇ ಬೆಳವಣಿಗೆ ಆಗಿರಲಿಲ್ಲ. ಈಗಲೂ ಪರಮೇಶ್ವರ ಅವರೇ ಗೃಹ ಸಚಿವರಾಗಿದ್ದಾರೆ. ಠಾಣೆ ಆರಂಭವಾಗಿ ಒಂದು ದಶಕ ಕಳೆಯುವ ಹೊತ್ತಿಗೆ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿದೆ.

ADVERTISEMENT

ಮಳೆ ನೀರು ತೊಟ್ಟಿಕ್ಕುವುದನ್ನು ತಡೆಯುವ ಉದ್ದೇಶದಿಂದ ಕಟ್ಟಡದ ಮೇಲ್ಭಾಗದಲ್ಲಿ ತಾಡಪಾಲು ಹೊದಿಸಲಾಗಿದೆ. ಇಲ್ಲಿನ ಕಡತಗಳನ್ನು ಬೇರೆ ಕಡೆ ಸಂಗ್ರಹಿಸಲಾಗಿದೆ. ಆರೋಪಿಗಳನ್ನು ಕರೆ ತಂದು ತನಿಖೆ, ವಿಚಾರಣೆ ನಡೆಸಲು ಸೂಕ್ತ ಜಾಗವಿಲ್ಲ. ಸಬ್‌ಇನ್‌ಸ್ಪೆಕ್ಟರ್‌ ಕಚೇರಿ, ತನಿಖಾ ಸ್ಥಳ ಎಲ್ಲವೂ ಒಂದೇ ಆಗಿದೆ. ಇದರಿಂದ ಮುಕ್ತವಾಗಿ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ. ಠಾಣೆಯ ಬಳಿ ಸಾರ್ವಜನಿಕರು ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಯಾವುದೇ ಸೌಲಭ್ಯವೂ ಇಲ್ಲ.

ಜನರ ರಕ್ಷಣೆ, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಹಗಲಿರುಳು ದುಡಿಯುವ ಪೊಲೀಸರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿತ್ತು. ಮಳೆ ಬಂದಾಗ ಪ್ರತಿ ಸಾರಿಯೂ ಜೀವ ಕೈಯಲ್ಲಿಡಿದು ಕರ್ತವ್ಯ ನಿರ್ವಹಿಸುತ್ತಿದ್ದರು. ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಠಾಣೆಯ ಪೊಲೀಸರ ನೆಮ್ಮದಿಗೆ ಕಾರಣವಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡರೆ ಸಾಕು ಎಂದು ಕಾಯುತ್ತಿದ್ದಾರೆ.

ಸಪ್ತಗಿರಿ ಬಡಾವಣೆಯಲ್ಲಿ ಠಾಣೆಗೆ ಕಟ್ಟಡ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಶುರು ಸೋರುವ ಕೊಠಡಿಯಲ್ಲಿ ಪೊಲೀಸರು ಕೆಲಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.