ADVERTISEMENT

₹80 ಲಕ್ಷ ವೆಚ್ಚದಲ್ಲಿ ನಾಲ್ಕು ಚೆಕ್ ಡ್ಯಾಂ

ರೋಟರಿಯಿಂದ ಕಣಿವೇನಹಳ್ಳಿ, ಪಾಲಕುಂಟೆ, ಜೂಲಪಟ್ಟನಹಟ್ಟಿ, ಸಿ.ಕೆ.ಪುರದಲ್ಲಿ ನಿರ್ಮಾಣ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:26 IST
Last Updated 7 ಜುಲೈ 2024, 15:26 IST
ಪಾವಗಡ ತಾಲ್ಲೂಕು ಕಣಿವೇನಹಳ್ಳಿ ಬಳಿ ಚೆಕ್ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲಾಯಿತು
ಪಾವಗಡ ತಾಲ್ಲೂಕು ಕಣಿವೇನಹಳ್ಳಿ ಬಳಿ ಚೆಕ್ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲಾಯಿತು   

ಪಾವಗಡ: ರೋಟರಿ ಸಂಸ್ಥೆಯಿಂದ ತಾಲ್ಲೂಕಿನಲ್ಲಿ ₹80 ಲಕ್ಷ ವೆಚ್ಚದಲ್ಲಿ ನಾಲ್ಕು ಚೆಕ್ ಡ್ಯಾಂ ನಿರ್ಮಿಸಲಾಗುವುದು ಎಂದು ರೋಟರಿ ಚೆಕ್‌ ಡ್ಯಾಂ ಯೋಜನೆ ಪದಾಧಿಕಾರಿ ಸುರೇಶ್ ಅಂಬ್ಲಿ ತಿಳಿಸಿದರು.

ತಾಲ್ಲೂಕಿನ ಕಣಿವೇನಹಳ್ಳಿ ಬಳಿ ಭಾನುವಾರ ಚೆಕ್ ಡ್ಯಾಂ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ತಾಲ್ಲೂಕಿನ ಕಣಿವೇನಹಳ್ಳಿ, ಪಾಲಕುಂಟೆ, ಜೂಲಪಟ್ಟನಹಟ್ಟಿ(ಕನ್ನಮೇಡಿ), ಸಿ.ಕೆ.ಪುರ ಗ್ರಾಮಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.

ADVERTISEMENT

ಚೆಕ್ ಡ್ಯಾಂ ಯೋಜನಾ ಸಂಯೋಜಕ ಮಾಕಂ ಪ್ರಭಾಕರ್, ಈಗಾಗಲೇ ತಾಲ್ಲೂಕಿನ ವಿವಿಧೆಡೆ ಸುಮಾರು ₹75 ಲಕ್ಷ ವೆಚ್ಚದಲ್ಲಿ ಆರು ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಚೆಕ್ ಡ್ಯಾಂ ನಿರ್ಮಿಸಿರುವ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿದೆ ಎಂದು ಹೇಳಿದರು.

ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ₹3 ಲಕ್ಷ ವೆಚ್ಚದಲ್ಲಿ ತಟ್ಟೆ, ಲೋಟ ವಿತರಿಸಲಾಗುವುದು ಎಂದು ತಿಳಿಸಿದರು.

ಎಂಜಿನಿಯರ್ ಛಲಪತಿ, ತಾಲ್ಲೂಕಿಗೆ ಚೆಕ್ ಡ್ಯಾಂಗಳು ಅತ್ಯವಶ್ಯಕ. ಈಗ ನಿರ್ಮಿಸುತ್ತಿರುವ ನಾಲ್ಕು ಚೆಕ್ ಡ್ಯಾಂ ಸೇರಿದಂತೆ ತಾಲ್ಲೂಕಿನಲ್ಲಿ ಈವರೆಗೆ 10 ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಹೊಸದಾಗಿ ನಿರ್ಮಿಸುತ್ತಿರುವ ಚೆಕ್‌ ಡ್ಯಾಂನಿಂದ ಸುಮಾರು 100 ಕೊಳವೆ ಬಾವಿಗಳನ್ನು ಅವಲಂಬಿಸಿರುವ ರೈತರಿಗೆ ಅನುಕೂಲವಾಗಲಿದೆ ಎಂದರು.

ಸದಾಶಿವ ನಗರದ ರೋಟರಿ ಅಧ್ಯಕ್ಷ ಸುದರ್ಶನ್ ರೆಡ್ಡಿ, ವಸಂತ್ ಚಂದ್ರ, ಉಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಸತ್ಯ ಲೋಕೇಶ್, ಕಾರ್ಯದರ್ಶಿ ರಾಮಾಂಜಿ, ಎಂ.ಎಸ್. ವಿಶ್ವನಾಥ್, ಕನ್ನಮೇಡಿ ಲೋಕೇಶ್, ಮಾಜಿ ಅಧ್ಯಕ್ಷ ಎಂಎಜಿ ಇಮ್ರಾನ್, ಶ್ರೀಧರ್ ಗುಪ್ತ, ಯೋಜನಾ ಎಂಜಿನಿಯರ್ ಮಣಿಕಂಠ, ನಿವೃತ್ತ ಮುಖ್ಯ ಶಿಕ್ಷಕ ಕೆ. ಎಲ್. ರಘುನಾಥರಾವ್, ಉಪನ್ಯಾಸಕ ಕೆ.ಆರ್. ವಿಜಯಸಿಂಹ, ಕೆ ಜೆ ಪ್ರಣವ್ ವಷಿಷ್ಠ, ಕೆ ಜೆ ಹರ್ಷಿತ, ಶರಣ್ಯ, ಸ್ಕಂದ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.